ಪೊಲೀಸರು ಬೂಟು ನೆಕ್ಕುವ ಕೆಲಸ ಮಾಡಬಾರದು : ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ
ಕಲಬುರಗಿ : ‘ಪೊಲೀಸರು ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಅವರು ಗುಲಾಮಗಿರಿ, ಬೂಟ್ ನೆಕ್ಕುವ ಕೆಲಸವನ್ನು ಎಂದೂ ಮಾಡಬಾರದು’ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸಂವಿಧಾನ ವಿರೋಧಿ ನಡೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿಯ ವೃತ್ತದ ಬಳಿ ಬಿಜೆಪಿ ಹಮ್ಮಿಕೊಂಡಿದ್ದ ‘ಕಲಬುರಗಿ ಚಲೋ’ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚಿತ್ತಾಪುರದಲ್ಲಿ ಪೊಲೀಸರು ನಾಟಕ ಆಡಿದ್ದಾರೆ. ಉದ್ದೇಶಪೂರ್ವಕವಾಗಿಯೇ ನನ್ನ ವಿರುದ್ಧ ಗದ್ದಲ ಮಾಡಿದ್ದಾರೆ ಎಂದು ದೂರಿದರು.
ಅಪ್ಪಟ ದಲಿತ ಯಾರಾದರೂ ಇದ್ದರೆ ಅದು ಛಲವಾದಿ ನಾರಾಯಣಸ್ವಾಮಿ. ಚಾಪೆ ಮೇಲೆ ಮಲಗಿದ್ದೇನೆ. ಚಾಪೆ ಇಲ್ಲದೆ ಮಣ್ಣಿನ ಮೇಲೆ ಮಲಗಿದ್ದೇನೆ. ಕೆರೆ-ಕುಂಟೆಗಳ ನೀರು ಕುಡಿದಿದ್ದೇನೆ. ತಂಗಳ ತಿಂದಿದ್ದೇನೆ. ನಾನು ಚಿನ್ನದ ಚಮಚ ಇಟ್ಟುಕೊಂಡು ಹುಟ್ಟಿದವನಲ್ಲ. ಮಲ್ಲಿಕಾರ್ಜುನ ಖರ್ಗೆಯವರಿಗೆ ಹಿಂದೆ ಕಷ್ಟ ಇದ್ದಿರಬಹುದು ಎಂದರಲ್ಲದೇ, ನನಗೀಗ ಹಕ್ಕುಚ್ಯುತಿ ಆಗಿದೆ ಎಂದು ಅವರು ತಿಳಿಸಿದರು.
ನಾನು ಬಲಿತ ದಲಿತ ಅಲ್ಲ, ಆಸ್ತಿ ಮಾಡಿಲ್ಲ. ಅಧಿಕಾರ ಅನುಭವಿಸಿಲ್ಲ. 40 ವರ್ಷ ಕಾಂಗ್ರೆಸ್‌ನಲ್ಲಿ ದುಡಿದೆ. ಗುರುಮಿಠಕಲ್‌ನಲ್ಲಿ 9 ಬಾರಿ ಗೆದ್ದಿದ್ದಾರೆ. ಅಲ್ಲಿ ಒಬ್ಬ ದಲಿತ ನಾಯಕ ಹುಟ್ಟಿದ್ದಾನಾ?. ನೀವು ನಡೆದ ಕಡೆ ಹುಲ್ಲೂ ಹುಟ್ಟುವುದಿಲ್ಲ. ನಿಮ್ಮನ್ನು ಹೊತ್ತು ತಿರುಗಿ ನಿಮ್ಮ ಹೆಸರು ಎಲ್ಲೆಡೆ ಹೇಳುವಂತೆ ಮಾಡಿದ್ದು ನಾನು ಎಂದು ಅವರು ನೆನಪಿಸಿಕೊಟ್ಟರು. ಕಾಂಗ್ರೆಸ್‌ನ ದಲಿತರು ಬಾಯಿ ಬಿಡಲಾರದ ಸ್ಥಿತಿಯಲ್ಲಿದ್ದಾರೆ. ಅದನ್ನೇ ಹೇಳಲು ನನಗೆ ಫೋನ್ ಮಾಡಿದ್ದರು. ಡಾ.ಅಂಬೇಡ್ಕರರನ್ನು ಸೋಲಿಸಿದ್ದು, ಅಪಮಾನ ಮಾಡಿದ್ದು ನೂರಕ್ಕೆ ನೂರು ಕಾಂಗ್ರೆಸ್ ಎಂದು ಅವರು ಪುನರುಚ್ಚರಿಸಿದರು.