ಮೊದಲ ಹಂತದ ಚುನಾವಣೆ ನಂತರ ಪ್ರಧಾನಿ ಮೋದಿಯ ಕುರ್ಚಿ ಅಲುಗಾಡುತ್ತಿದೆ : ಸಚಿವ ಪ್ರಿಯಾಂಕ್ ಖರ್ಗೆ

Update: 2024-04-24 18:01 GMT

ಕಲಬುರಗಿ : ರಾಜ್ಯದಲ್ಲಿ ಈಗ ಶಿಕ್ಷಣ, ಯುವಕರಿಗೆ ನೌಕರಿ, ಸಾಮಾಜಿಕ ಸಮಾನತೆ, ಮಹಿಳೆಯರ ಸಬಲೀಕರಣದ ಚರ್ಚೆ ನಡೆದಿದೆ. ಆದರೆ ಹಿಂದಿನ ಬಿಜೆಪಿ ಸರ್ಕಾರ ಇದ್ದಾಗ ಅಝಾನ್, ಹಿಜಾಬ್, ಹಲಾಲ್ ಕಟ್, ಜಟ್ಕಾಕಟ್ ನಂತಹ ವಿಷಯಗಳೆ ಚರ್ಚೆಯಲ್ಲಿದ್ದವು. ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ನಿಮ್ಮ ಮುಂದೆ ಮತ ಕೇಳಲು ಬಂದಿದ್ದೇವೆ. ಹೋಲಿಕೆ ಮಾಡಿ ನೋಡಿ ಮತದಾನ‌ ಮಾಡಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದರು.

ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರ ಪರ ಮತಯಾಚಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯದಲ್ಲಿ 4.80 ಕೋಟಿ ಜನರು ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ.‌ ಇದಕ್ಕೆ ನಿಮ್ಮ ಮತಗಳ ಆಶೀರ್ವಾದ ಕಾರಣವಾಗಿದೆ ಎಂದು ಹೇಳಿದ ಖರ್ಗೆ, ಬಿಜೆಪಿ ಎಂದಾದರೂ ಮಹಿಳಾ ಸಬಲೀಕರಣ, ಯುವಕರಿಗೆ ಉದ್ಯೋಗ ನೀಡುವ ಮಾತು ಆಡಿದೆಯೇ? ಎಂದು ಪ್ರಶ್ನಿಸಿದರು

ಮೋದಿಯ ಕುರ್ಚಿ ಅಲುಗಾಡುತ್ತಿದೆ

ಮೊದಲ ಹಂತದ ಚುನಾವಣೆಯ ನಂತರ ಮೋದಿಯ ಕುರ್ಚಿ ಅಲಗಾಡುತ್ತಿದೆ. ಅವರು ನಿರೀಕ್ಷಿಸಿದಂತೆ ಮತ ಬಂದಿಲ್ಲ ಎಂದು ಅರಿವಿಗೆ ಬಂದ ಕೂಡಲೇ ಅವರ ಮಾತಿನ ಧಾಟಿ ಬದಲಾಗಿದೆ. ಛತ್ತೀಸ್ ಗಡ್, ಗೋವಾ ಹೀಗೆ ಹೋದ ಕಡೆಯೆಲ್ಲ ಸುಳ್ಳು ಹೇಳುತ್ತಲೇ ಹೋಗಿದ್ದಾರೆ. ಚಿಕ್ಕ ಮಕ್ಕಳು ಕೂಡಾ ಸುಳ್ಳು ಹೇಳಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ಮೋದಿ ಸಲೀಸಾಗಿ ಸುಳ್ಳು ಹೇಳುತ್ತಾರೆ. ಬಿಜೆಪಿಯ ವಿರುದ್ದ ನಾವು ಹೋರಾಟ ನಡೆಸುತ್ತೇವೆ. ಕಾಂಗ್ರೆಸ್ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಬಿಜೆಪಿಗೆ 400 ಸೀಟು ಬರುವುದಕ್ಕೆ ಬಿಡುವುದಿಲ್ಲ ಎಂದರು.

ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾವಣೆ ಮಾಡುವ ಮೂಲಕ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು

ವೇದಿಕೆಯ ಮೇಲೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ ಪಾಟೀಲ್, ಶಾಸಕಿ ಕನೀಝ್ ಫಾತಿಮಾ‌, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಭಾನುಪ್ರತಾಪ್ ಸಿಂಗ್ ಸೇರಿದಂತೆ ಹಲವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News