×
Ad

ಆಳಂದ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಸರಕಾರಕ್ಕೆ ಪ್ರಸ್ತಾವನೆ : ಸಚಿವ ರಹೀಂ ಖಾನ್

Update: 2025-09-08 19:56 IST

ಕಲಬುರಗಿ: ಜನಸಂಖ್ಯೆ ಹಾಗೂ ಪಟ್ಟಣದ ವ್ಯಾಪ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಳಂದ ಪುರಸಭೆಯನ್ನು ನಗರಸಭೆಗೆ ಮೇಲ್ದರ್ಜೆಗೇರಿಸಲು ಶೀಘ್ರದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ರಾಜ್ಯದ ಪೌರಾಡಳಿತ ಮತ್ತು ಹಜ್ ಇಲಾಖೆಯ ಸಚಿವ ರಹೀಂ ಖಾನ್ ಹೇಳಿದರು.

ಸೋಮವಾರ ಆಳಂದ ಪಟ್ಟಣದ ಶ್ರೀರಾಮ ಮಾರುಕಟ್ಟೆ ಆವರಣದಲ್ಲಿ ರಾಜ್ಯ ಹಣಕಾಸು ಆಯೋಗ ನಿಧಿಯಿಂದ 87 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿತ ಇಂದಿರಾ ಕ್ಯಾಂಟಿನ್ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, “ಇಂದಿರಾ ಕ್ಯಾಂಟಿನ್ ಅನ್ನಸಂತಾರ್ಪಣಭವ ಬಡಜನರಿಗೆ ಹಸಿವಿನ ಕಾಟ ತಗ್ಗಿಸುವುದರೊಂದಿಗೆ ಸಾಮಾಜಿಕ ಸಮಾನತೆಯನ್ನು ಬಲಪಡಿಸುತ್ತದೆ” ಎಂದರು.

ಆಳಂದ ಮುಖ್ಯರಸ್ತೆ ಅಗಲೀಕರಣಕ್ಕೆ ಮುಖ್ಯಮಂತ್ರಿ ಅನುಮೋದನೆ ನೀಡಲಾಗಿದೆ, ಶೀಘ್ರದಲ್ಲೇ ಪುರಸಭೆ ಹೊಸ ಕಟ್ಟಡ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದರು.

ಘನತ್ಯಾಜ್ಯ ಘಟಕವನ್ನು ರಾಜ್ಯಕ್ಕೆ ಮಾದರಿಯನ್ನಾಗಿ ರೂಪಿಸಿರುವ ಆಳಂದ ಪುರಸಭೆಯ ಕಾರ್ಯವನ್ನು ರಾಜ್ಯವ್ಯಾಪಿ ವಿಸ್ತರಿಸಲಾಗುವುದು. ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಬಡವರ ಬದುಕು ಸುಧಾರಿಸುತ್ತಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ನೀತಿ ಆಯೋಗದ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಆರ್.ಪಾಟೀಲ್‌, ಇಲ್ಲಿ ನಡೆಯುತ್ತಿರುವ ಮುಖ್ಯರಸ್ತೆ ಅಗಲೀಕರಣವನ್ನು ಯಾವ ಕಾರಣಕ್ಕೂ ನಿಲ್ಲಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಶ್ರೀರಾಮ ಮಾರುಕಟ್ಟೆಯ ಹಳೆಯ ಕಟ್ಟಡ ತೆರವುಗೊಳಿಸಿ, ನೂತನ ಎರಡು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗುವುದು. ಜೊತೆಗೆ ಎಪಿಎಂಸಿ ನಿವೇಶನದಲ್ಲಿ ವಾರದ ಸಂತೆಗೆ ವ್ಯವಸ್ಥೆ ಕಲ್ಪಿಸಲಾಗುವುದು. ಹಳೆಯ ಚೆಕ್‌ಪೋಸ್ಟ್ ನಿಂದ ಸಿದ್ಧಾರ್ಥ ಚೌಕವರೆಗೆ 2 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೂ ಅನುಮೋದನೆ ದೊರೆತಿದೆ ಎಂದರು.

ಇಂದಿರಾ ಕ್ಯಾಂಟಿನ್ ಯೋಜನೆಗೆ ಒಟ್ಟು 130 ಲಕ್ಷ ರೂ.ಗಳ ಅನುದಾನ ಮೀಸಲಿಡಲಾಗಿದ್ದು, ಕಟ್ಟಡಕ್ಕೆ 87 ಲಕ್ಷ, ಅಡುಗೆ ಸಾಮಗ್ರಿಗಳಿಗೆ 35 ಲಕ್ಷ ಮತ್ತು ಕಂಪೌಂಡ್ ಗೋಡೆಗೆ 8 ಲಕ್ಷ ರೂ. ವೆಚ್ಚವಾಗಿದೆ. ಅದೇ ರೀತಿ, ಸ್ವಚ್ಛ ಭಾರತ ಮಿಷನ್ 2.0 ಅಡಿಯಲ್ಲಿ ದರ್ಗಾಬೇಸ್ ಹತ್ತಿರ ಶೌಚಾಲಯಕ್ಕೆ 18 ಲಕ್ಷ ರೂ. ಹಾಗೂ ಮೂತ್ರಾಲಯಕ್ಕೆ 2.5 ಲಕ್ಷ ರೂ. ಖರ್ಚು ಮಾಡಲಾಗಿದೆ. ಘನತ್ಯಾಜ್ಯ ನಿರ್ವಹಣೆಗಾಗಿ 30 ಲಕ್ಷ ರೂ. ವೆಚ್ಚದಲ್ಲಿ ವಾಹನಗಳನ್ನು ಖರೀದಿಸಲಾಗಿದೆ ಎಂದು ವಿವರಿಸಿದರು.

ಈ ಸಂದರ್ಭ ನಾಲ್ವರು ಸ್ನಾತಕೋತ್ತರ ಪದವಿಧರರಿಗೆ ತಲಾ 15 ಸಾವಿರ ರೂ.ಗಳ ಸಹಾಯಧನ, ಆರು ಮಂದಿ ಬಿ.ಇ ಮತ್ತು ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಬೀದಿ ಬದಿ ವ್ಯಾಪಾರಿಗಳಿಗೆ ಪ್ರಧಾನಮಂತ್ರಿ ಸ್ವಾನಿಧಿ ಯೋಜನೆ ಅಡಿಯಲ್ಲಿ ಡಿಜಿಟಲ್ ಕಾರ್ಡ್ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಸ್ವಸಹಾಯ ಗುಂಪುಗಳಿಗೆ ಪುಸ್ತಕಗಳನ್ನು ಹಂಚಿಕೊಡಲಾಯಿತು.

ಕಾರ್ಯಕ್ರಮದಲ್ಲಿ ಪೌರಾಡಳಿತ ಕಲಬುರಗಿ ಯೋಜನಾ ನಿರ್ದೇಶಕ ಮುನಾವರ ದೌಲಾ, ಪುರಸಭೆ ಅಧ್ಯಕ್ಷ ಫೀರದೋಸ್ ಅನ್ಸಾರಿಗೌಡಾ, ಉಪಾಧ್ಯಕ್ಷೆ ಕವಿತಾ ಎಸ್. ನಾಯಕ, ತಹಶೀಲ್ದಾರ್‌ ಅಣ್ಣಾರಾವ್ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಸದಸ್ಯರು ಹಾಗೂ ಪಟ್ಟಣ-ಗ್ರಾಮೀಣ ಭಾಗದ ಜನರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News