Sedam | ಉಚಿತ ಪಡಿತರ ವಿತರಣೆಯಲ್ಲಿ ಹಣ ವಸೂಲಿ ಆರೋಪ: ಕ್ರಮಕ್ಕೆ ನವನಿರ್ಮಾಣ ಸೇನೆ ಆಗ್ರಹ
ಸೇಡಂ: ತಾಲೂಕಿನ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತ ಪಡಿತರ ಅಕ್ಕಿ ವಿತರಣೆ ವೇಳೆ ಪಡಿತರ ಚೀಟಿದಾರರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ಸಂಘಟನೆಯ ಕಾರ್ಯಕರ್ತರು, ತಾಲೂಕಿನ ವಿವಿಧ ಗ್ರಾಮಗಳ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಸಾರ್ವಜನಿಕರು ಹಲವು ಬಾರಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಪಡಿತರ ವಿತರಣೆ ವೇಳೆ ಪದೇಪದೇ ಸರ್ವರ್ ಸಮಸ್ಯೆ ಉಂಟಾಗುತ್ತಿರುವುದರಿಂದ ಪಡಿತರ ಚೀಟಿದಾರರು ದಿನಗಟ್ಟಲೆ ನ್ಯಾಯಬೆಲೆ ಅಂಗಡಿಗಳಿಗೆ ಅಲೆದಾಡಬೇಕಾಗಿದೆ. ಸರ್ವರ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದರ ಜೊತೆಗೆ, ಪಡಿತರ ವಿತರಣೆಯ ಹೆಸರಿನಲ್ಲಿ ಯಾವುದೇ ರೀತಿಯ ಹಣ ವಸೂಲಿ ನಡೆಯದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರದಿಂದ ಉಚಿತವಾಗಿ ನೀಡಲಾಗುವ ಪಡಿತರಕ್ಕಾಗಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಲ್ಲಿ ಅವುಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಪಡಿತರ ವಿತರಣಾ ವ್ಯವಸ್ಥೆಯಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ನವನಿರ್ಮಾಣ ಸೇನೆ ತಾಲೂಕು ಅಧ್ಯಕ್ಷ ಭೀಮಾಶಂಕರ ಕೊರವಿ, ಹಣಮಂತ ಭರತನೂರ, ರಾಜು, ಅಬ್ದುಲ್, ರವಿ ಹಾಬಾಳ, ದೊಡಪ್ಪ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.