ಸೇಡಂನಲ್ಲಿ ಬೇಳೆ ಕಾಳು ಅಭಿವೃದ್ಧಿ ಸಂಸ್ಥೆ ಸ್ಥಾಪಿಸಲು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮನವಿ
ಕಲಬುರಗಿ: ಕಲಬುರಗಿ ಜಿಲ್ಲೆಯ ಒಟ್ಟಾರೆ ಬೇಳೆಕಾಳು ಉತ್ಪಾದನೆಯಲ್ಲಿ ಶೇ.50 ರಷ್ಟು ಪಾಲನ್ನು ಹೊಂದಿರುವ ಸೇಡಂ ಉಪವಿಭಾಗದಲ್ಲಿ, ಮಳೆ ವೈಪರೀತ್ಯದಿಂದ ಉತ್ಪಾದಕತೆ ಕುಸಿಯುತ್ತಿದೆ. ಇದನ್ನು ಸುಧಾರಿಸಲು ಬೆಳೆ ನಿರ್ವಹಣೆ ಹಾಗೂ ದಾಲ್ ಸಂಸ್ಕರಣೆ ಕುರಿತು ಸಂಶೋಧನೆ ನಡೆಸಲು ಸೇಡಂನಲ್ಲಿ 'ಬೇಳೆಕಾಳು ಅಭಿವೃದ್ಧಿ ಸಂಸ್ಥೆ'ಯನ್ನು ಸ್ಥಾಪಿಸಬೇಕು," ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೇಡಿಕೆ ಸಲ್ಲಿಸಿದರು.
ಸೋಮವಾರ ಸೇಡಂ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೆಕೆಆರ್‌ಡಿಬಿ ಸಂಯುಕ್ತಾಶ್ರಯದಲ್ಲಿ ನಡೆದ ಸುಮಾರು 688 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳ ಚಾಲನಾ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸೇಡಂ ಉಪವಿಭಾಗದ ವ್ಯಾಪ್ತಿಗೆ ಬರುವ ಸೇಡಂ, ಚಿತ್ತಾಪುರ, ಚಿಂಚೋಳಿ, ಕಾಳಗಿ ಮತ್ತು ಶಹಾಬಾದ್ ತಾಲೂಕುಗಳು ಜಿಲ್ಲೆಯ ಪ್ರಮುಖ ಬೇಳೆಕಾಳು ಬೆಳೆಯುವ ಪ್ರದೇಶಗಳಾಗಿವೆ. "ಈ ಭಾಗದ ಮಣ್ಣಿನಲ್ಲಿ ಕ್ಯಾಲ್ಸಿಯಂ ಮತ್ತು ಪೊಟ್ಯಾಶ್ ಅಂಶ ಹೆಚ್ಚಾಗಿದ್ದು, ನೀರನ್ನು ಹಿಡಿದಿಟ್ಟುಕೊಳ್ಳುವ ವಿಶಿಷ್ಟ ಸಾಮರ್ಥ್ಯ ಹೊಂದಿದೆ. ಉಪವಿಭಾಗದ ಒಟ್ಟು ಸಾಗುವಳಿ ಪ್ರದೇಶದ ಶೇ. 85 ರಷ್ಟು ಭಾಗದಲ್ಲಿ ಬೇಳೆಕಾಳುಗಳನ್ನೇ ಬೆಳೆಯಲಾಗುತ್ತಿದೆ," ಎಂದು ಸಚಿವರು ವಿವರಿಸಿದರು.
ಇಡೀ ರಾಜ್ಯದ ಶೇ. 45 ರಷ್ಟು ತೊಗರಿಯನ್ನು ಕಲಬುರಗಿ ಜಿಲ್ಲೆಯಲ್ಲೇ ಬೆಳೆಯಲಾಗುತ್ತದೆ. ಅದರಲ್ಲೂ ಅರ್ಧದಷ್ಟು ಪಾಲು ಸೇಡಂ ಉಪವಿಭಾಗದ್ದಾಗಿದೆ. "ಬೆಳಗಾವಿಯ ಸಕ್ಕರೆ ಸಂಸ್ಥೆಯ ಮಾದರಿಯಲ್ಲಿಯೇ, ಸೇಡಂ ಅನ್ನು ಕೇಂದ್ರಸ್ಥಾನವಾಗಿಸಿಕೊಂಡು ಬೇಳೆಕಾಳು ಅಭಿವೃದ್ಧಿ ಸಂಸ್ಥೆ ಸ್ಥಾಪಿಸಿದರೆ ರೈತಾಪಿ ಜನರಿಗೆ ಹಾಗೂ ದಾಲ್ ಸಂಸ್ಕರಣಾ ಉದ್ಯಮಕ್ಕೆ ಹೆಚ್ಚಿನ ಅನುಕೂಲವಾಗಲಿದೆ," ಎಂದು ಸಚಿವರು ಸಿಎಂಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.