ಸೇಡಂ | ಹೆಸರು ಖರೀದಿ ಸ್ಥಗಿತಕ್ಕೆ ಆಕ್ರೋಶ; ಶೀಘ್ರ ಆರಂಭಿಸದಿದ್ದರೆ ರಸ್ತೆ ತಡೆ ಪ್ರತಿಭಟನೆಯ ಎಚ್ಚರಿಕೆ
ರೈತರಿಗೆ ತಪ್ಪದ ಖರೀದಿ ಕೇಂದ್ರಗಳ ಅಲೆದಾಟ: ವಿಶೇಷ ಪ್ಯಾಕೇಜ್‌ಗೆ ಶಾಂತಕುಮಾರ ಚನ್ನಕ್ಕಿ ಒತ್ತಾಯ
ಸೇಡಂ: ಖರೀದಿ ಕೇಂದ್ರಗಳಲ್ಲಿ ಗ್ರೇಡಿಂಗ್ ಹಾಗೂ ಇನ್ನಿತರ ತಾಂತ್ರಿಕ ನೆಪಗಳನ್ನು ಒಡ್ಡಿ ಹೆಸರು ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಬಾಕಿ ಉಳಿದಿರುವ ರೈತರ ಹೆಸರು ಬೆಳೆಯನ್ನು ಕೂಡಲೇ ಖರೀದಿ ಮಾಡಬೇಕು, ಇಲ್ಲದಿದ್ದರೆ ಬೃಹತ್ ರಸ್ತೆ ತಡೆ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರೈತ ಹಸಿರು ಸೇನೆಯ ಅಧ್ಯಕ್ಷ ಶಾಂತಕುಮಾರ ಚನ್ನಕ್ಕಿ ಎಚ್ಚರಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಈಗಾಗಲೇ ಶೇ. 80ರಷ್ಟು ಹೆಸರು ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನುಳಿದ ಸುಮಾರು 6 ಸಾವಿರ ಕ್ವಿಂಟಲ್ (ಶೇ. 20ರಷ್ಟು) ಹೆಸರು ಬೆಳೆಯನ್ನು ತಕ್ಷಣವೇ ಖರೀದಿ ಮಾಡಬೇಕು. ಖರೀದಿ ಸ್ಥಗಿತದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆಸರು ಖರೀದಿಗೆ ಆಗ್ರಹಿಸಿ ಕಳೆದ ಭಾನುವಾರ ಚಿಂಚೋಳಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು, "ನೈಸರ್ಗಿಕ ಕಾರಣಗಳಿಂದ ಬೆಳೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ ಕಡ್ಡಾಯವಾಗಿ ಖರೀದಿ ಮಾಡಬೇಕು" ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೆ, ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇಡಂಗೆ ಭೇಟಿ ನೀಡಿದ ಕಾರಣ ಅಂದು ಮಾತ್ರ ಹೆಸರಿಗಾಗಿ ಎರಡು ಟ್ರ್ಯಾಕ್ಟರ್‌ಗಳನ್ನು ಪಡೆಯಲಾಗಿತ್ತು. ಮಂಗಳವಾರದಿಂದ ಮತ್ತೆ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಚನ್ನಕ್ಕಿ ದೂರಿದರು.
ಹೆಸರು ಬೆಳೆ ಖರೀದಿಯೊಂದಿಗೆ, ತೊಗರಿ ಬೆಳೆಯಲ್ಲಿ ಕಂಡುಬಂದಿರುವ 'ಗೊಡ್ಡು ರೋಗ'ದಿಂದ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಕೂಡಲೇ ಸಮೀಕ್ಷೆ ನಡೆಸಿ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮನೋಹರ ರೆಡ್ಡಿ ಬಟಗೇರಾ, ರವಿ ಪಾಟೀಲ ಸೂರವಾರ, ಶಶಿಕಾಂತ ಗುತ್ತೇದಾರ, ವೆಂಕಟರೆಡ್ಡಿ ಬಟಗೇರಾ, ಮಹೇಶ ರೆಮಗೊಂಡ ಹಾಗೂ ಸತೀಶ ಗುತ್ತೇದಾರ ಉಪಸ್ಥಿತರಿದ್ದರು.