×
Ad

ಶಹಾಬಾದ್‌ | ಹಳೆ ಸೇತುವೆ ತೆರವುಗೊಳಿಸಲು ಅಧಿಕಾರಿಗಳಿಗೆ ಶಾಸಕ ಬಸವರಾಜ ಮತ್ತಿಮಡು ತಾಕೀತು

Update: 2025-10-03 20:58 IST

ಕಲಬುರಗಿ: ಶಹಾಬಾದ್‌ ನಗರದ ಮಧ್ಯಭಾಗದಲ್ಲಿರುವ ಅಜನಿ ಹಳ್ಳದಿಂದ ಪದೇ ಪದೇ ಆಗುತ್ತಿರುವ ಪ್ರವಾಹದಿಂದ ಸಾರ್ವಜನಿಕರಿಗೆ ತುಂಬಾ ಸಮಸ್ಯೆಗಳು ತಲೆದೋರಿತ್ತಿರುವುದನ್ನು ಮನಗಂಡು ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಅವರು ಸೇತುವೆಗೆ ಭೇಟಿ ನೀಡಿ ಪರಿಶೀಲಿಸಿದರು.

ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಸ್ಥಳೀಯ ಜನರು ಅಜನಿ ಹಳ್ಳಕ್ಕೆ ನಗರೋತ್ಥಾನದಲ್ಲಿ ಯೋಜನೆಯಡಿ ಸೇತುವೆ ನಿರ್ಮಾಣ ಮಾಡುವಾಗ ಹಳೆ ಸೇತುವೆ ತೆರವುಗೊಳಿಸಿ ಅದೇ ಸ್ಥಳದಲ್ಲಿ ಹೊಸದಾದ ಅದಕ್ಕಿಂತಲೂ ಎತ್ತರವಾದ ಸೇತುವೆ ನಿರ್ಮಾಣ ಮಾಡಬೇಕಿತ್ತು. ಆದರೆ ನಗರಸಭೆಯ ಅಧಿಕಾರಿಗಳು ಸೇರಿದಂತೆ ಅದಕ್ಕೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಸೇರಿಕೊಂಡು ಹಳೆ ಸೇತುವೆ ಬೀಳಿಸದೇ ಪಕ್ಕದಲ್ಲಿಯೇ ಅವೈಜ್ಞಾನಿಕ ಸೇತುವೆ ನಿರ್ಮಾಣ ಮಾಡಿದ್ದರಿಂದ ಸಮಸ್ಯೆಗಳು ತಲೆದೋರಿವೆ. ಹಳೆ ಸೇತುವೆ ಬೀಳಿಸದೇ ಇರುವುದರಿಂದ ನೀರು ಸರಾಗವಾಗಿ ಹರಿಯದೇ ಹಳೆ ಸೇತುವೆಗೆ ಬಡಿದು ಪಕ್ಕಕ್ಕೆ ಸರಿದು ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ನಗರಸಭೆಯ ತ್ಯಾಜ್ಯಗಳನ್ನು ಹಳ್ಳದ ದಂಡೆಗೆ ಸುರಿದ ಪರಿಣಾಮ ಹಳ್ಳ ಚಿಕ್ಕದಾಗಿದೆ. ಹಳ್ಳದಲ್ಲಿ ಕಸ ತುಂಬಿಕೊಂಡಿದ್ದರಿಂದ ವರ್ಷದಿಂದ ವರ್ಷಕ್ಕೆ ಸಮಸ್ಯೆಗಳು ಹೆಚ್ಚಾಗಿವೆ. ಈ ಬಗ್ಗೆ ನಗರಸಭೆಯ ಪೌರಾಯುಕ್ತರು ಯಾವುದೇ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

ತಕ್ಷಣವೇ ಹಳೆ ಸೇತುವೆ ಬೀಳಿಸಿ, ಸುತ್ತಮುತ್ತಲಿನ ಹೂಳು ಹಾಗೂ ಕಂಟಿಗಿಡಗಳನ್ನು ತೆಗೆಯಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡುತ್ತೆನೆ ಎಂದು ಭರವಸೆ ನೀಡಿದರಲ್ಲದೇ, ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಅವರಿಗೆ ಈ ಬಗ್ಗೆ ಬೇಗನೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು. ಅಲ್ಲದೇ ಆದಷ್ಟು ಬೇಗನೆ ಇದಕ್ಕೆ ಪರಿಹಾರ ಒದಗಿಸಲಾಗುವುದು ಎಂದರು.

ಶಹಾಬಾದ್ ತಹಶೀಲ್ದಾರ್‌ ನೀಲಪ್ರಭ, ನಗರಸಭೆ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಮಂಡಲ ಅಧ್ಯಕ್ಷ ನಿಂಗಣ್ಣ ಹುಳಗೋಳಕರ, ಅಣವೀರ ಇಂಗಿನಶೆಟ್ಟಿ, ಸಿದ್ರಾಮ ಕುಸಾಳೆ, ಮಹದೇವ ಗೊಬ್ಬೂರಕರ, ದೇವದಾಸ ಜಾಧವ್, ದಿನೇಶ ಗೌಳಿ, ಶಶಿಕಲಾ ಸಜ್ಜನ, ನಂದಾ ಗುಡೂರ, ನೀಲಗಂಗಮ್ಮ ಗಂಟ್ಲಿ, ಪದ್ಮಾ ಕಟಗೆ, ನಾರಾಯಣ ಕಂದಕೂರ, ರಾಜು ಮಾನೆ, ಪ್ರಮುಖರಾದ ಕನಕಪ್ಪ ದಂಡಗುಲಕರ, ಚಂದ್ರಕಾಂತ ಗೊಬ್ಬೂರಕರ, ಅರುಣ ಪಟ್ಟಣಕರ, ಭೀಮರಾವ ಸಾಳುಂಕೆ, ಬಸವರಾಜ ಬಿರಾದಾರ, ಶರಣು ವಸ್ತ್ರದ, ಜಗದೇವ ಸುಬೇದಾರ, ತಿರುಮಲ ದೇವಕರ, ಬಸವರಾಜ ಹಡಪದ, ಅಮರ ಕೋರೆ, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News