ಕಲಬುರಗಿ: ಸಿಂಗಾಪುರ ಮೂಲದ ಸಂಸ್ಥೆಯ ವಿದ್ಯಾರ್ಥಿವೇತನಕ್ಕೆ ಶರಣಬಸವ ವಿವಿಯ ಐವರು ವಿದ್ಯಾರ್ಥಿಗಳು ಆಯ್ಕೆ
ಕಲಬುರಗಿ : ಶರಣಬಸವ ವಿಶ್ವವಿದ್ಯಾಲಯದ ಗೋದುತಾಯಿ ಮಹಿಳಾ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಿಂಗಾಪುರ ಮೂಲದ ಸಂಸ್ಥೆಯಿಂದ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ.
ಸಿಂಗಾಪುರ ಮೂಲದ ಕ್ವೆಸ್ಟ್ ಗ್ಲೋಬಲ್ ಸಾಫ್ಟ್‌ವೇರ್ ಕಂಪೆನಿಯ CSR ಅಡಿಯಲ್ಲಿ 2024-25ರ ಶೈಕ್ಷಣಿಕ ವರ್ಷದಲ್ಲಿ ಪ್ರತಿಷ್ಠಿತ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ (IEEE) ವುಮನ್ ಇನ್ ಇಂಜಿನಿಯರಿಂಗ್ (WIE) ವತಿಯಿಂದ 50,000 ರೂ.ಗಳ ವಿದ್ಯಾರ್ಥಿವೇತನ ಪಡೆದಿದ್ದಾರೆ.
ಗೋದುತಾಯಿ ಮಹಿಳಾ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಸತತ ಎರಡನೇ ವರ್ಷ ವಿದ್ಯಾರ್ಥಿವೇತನವನ್ನು ಪಡೆದಿದ್ದಾರೆ. 2023-24 ಶೈಕ್ಷಣಿಕ ವರ್ಷದಲ್ಲಿ ಒಟ್ಟು 11 ವಿದ್ಯಾರ್ಥಿಗಳು ತಲಾ 50,000 ರೂ.ಗಳ ವಿದ್ಯಾರ್ಥಿವೇತನವನ್ನು ಪಡೆದಿದ್ದರು.
2024-25ನೇ ಸಾಲಿನಲ್ಲಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳಿಂದ ವಿದ್ಯಾರ್ಥಿವೇತನ ಪಡೆಯಲು ಆಯ್ಕೆಯಾದ 388 ವಿದ್ಯಾರ್ಥಿಗಳಲ್ಲಿ ಈ ಐವರು ಸೇರಿದ್ದಾರೆ.
IEEE ವಿದ್ಯಾರ್ಥಿ ಶಾಖೆಯ ಕೌನ್ಸೆಲರ್ ಆಗಿರುವ ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ. ಲಕ್ಷ್ಮಿ ಪಾಟೀಲ್ ಮಾಕಾ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲನಿರ್ಂಗ್ ವಿಭಾಗದ ವೈಷ್ಣವಿ ಸೋಮಾ, ರಾಧಿಕಾ ಷಣ್ಮುಖ್ ಮತ್ತು ಮುಹಮ್ಮದಿ ಮಹೀನ್ ನಾಝ್ ಹಾಗೂ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್‌ನ ಭೂಮಿಕಾ ರೆಡ್ಡಿ, ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್ ವಿಭಾಗದ ವೈಷ್ಣವಿ ಟಕ್ಲೆ ವಿದ್ಯಾರ್ಥಿ ವೇತನ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ಪರ್ಸನ್ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ, ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಮತ್ತು ಕುಲಸಚಿವ ಡಾ. ಎಸ್. ಜಿ. ಡೊಳ್ಳೇಗೌಡರ್ ಸೇರಿದಂತೆ ಇತರರು ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.