ರಾಜ್ಯ ಮಟ್ಟದ ಬಾಲಕರ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ತೆರೆ : ದಕ್ಷಿಣ ಕನ್ನಡ ಜಿಲ್ಲೆಗೆ ಸಮಗ್ರ ಚಾಂಪಿಯನ್ ಪಟ್ಟ
ಕಲಬುರಗಿ: ಕರ್ನಾಟಕ ರಾಜ್ಯಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಬಾಲಕರ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ತೆರೆ ಬಿದ್ದಿದ್ದು, ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಚಾಂಪಿಯನ್ ಪಟ್ಟ ಪಡೆದುಕೊಂಡಿದೆ.
ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆ ಹಮ್ಮಿಕೊಂಡಿರುವ ರಾಜ್ಯಮಟ್ಟದ ಬಾಲಕರ ಕ್ರೀಡಾಕೂಟದ ಸಮಾರೋಪ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಪದಕ ವಿತರಿಸಲಾಯಿತು. ಸಮಾರೋಪ ಸಮಾರಂಭದಲ್ಲಿ 36 ಅಂಕ ಪಡೆದು 2025- 26ನೇ ಸಾಲಿನ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಟ್ರೋಫಿ ವಿತರಣೆ ಮಾಡಲಾಯಿತು.
ಇದೇ ವೇಳೆ ಎರಡು ಅಥ್ಲೆಟಿಕ್ಸ್ ನಲ್ಲಿ ಎರಡು ಚಿನ್ನದ ಪದಕ ಪಡೆದಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿದ್ಯಾರ್ಥಿ ನಿತಿನ್ ಗೌಡ ಎಂ. ಅವರಿಗೆ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ದಕ್ಷ ದೀಪಕ್, ಮಹೇಶ್ ಪಾಟೀಲ್, ಪ್ರವೀಣ್ ಅರ್ಜುನ್, ಲಕ್ಷ್ಮಣ್ ಸಿದ್ದಪ್ಪ ಹಾಗೂ ಅಬೂಬಕರ್ ಪದಕ ಪಡೆದುಕೊಂಡರು.
ಈ ವೇಳೆ ಮಾತನಾಡಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಸುರೇಶ್ ಅಕ್ಕಣ್ಣ, ಕಾರ್ಯಕ್ರಮದ ಯಶಸ್ಸಿಗೆ ಉಪನ್ಯಾಸಕರು ಎಲೆಮರೆ ಕಾಯಿಯಂತೆ ಕೆಲಸ ನಿರ್ವಹಿಸಿದ್ದಾರೆ. ಎಲ್ಲರ ಶ್ರಮದಿಂದ ಕ್ರೀಡಾಕೂಟ ಯಶಸ್ವಿಯಾಗಿದೆ. ವಿಜೇತರಾಗಿರುವ ಎಲ್ಲಾ ಕ್ರೀಡಾಪಟುಗಳಿಗೆ ಶುಭವಾಗಲಿ ಎಂದು ಹಾರೈಸಿದರು.
ಈ ವೇಳೆ ಕಲ್ಯಾಣ ಕರ್ನಾಟಕದ ದೈಹಿಕ ಶಿಕ್ಷಕ ಉಪನ್ಯಾಸಕರ ಬಳಗದ ಪ್ರೇಮನಾಥ್ ಹಾಗೂ ದಿನೇಶ್ ಅವರು ಮಾತನಾಡಿದರು.
ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯಕಾರಿಣಿ ಸದಸ್ಯ ಧರ್ಮರಾಜ ಜವಳಿ, ಪ್ರಾಚಾರ್ಯ ಸಂಘದ ಅಧ್ಯಕ್ಷ ಬಸವರಾಜ ಬಿರಾದಾರ, ಉಪನ್ಯಾಸಕರ ಸಂಘದ ಅಧ್ಯಕ್ಷ ಜೆ.ಮಲ್ಲಪ್ಪ, ಶ್ರೀಶೈಲ ಬೋನಾಳ, ಎನ್ಎಸ್ಎಸ್ ಅಧಿಕಾರಿ ಚಂದ್ರಶೇಖರ್ ದೊಡ್ಡಮನಿ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ, ಭೀಮಾಶಂಕರ ಫಿರೋಜಾಬಾದ್, ಶಿವಕುಮಾರ್ ಸಜ್ಜನ್ ಸೇರಿದಂತೆ ಮತ್ತಿತರ ಅಧಿಕಾರಿಗಳು, ಉಪನ್ಯಾಸಕರು, ವೇದಿಕೆಯ ಮೇಲೆ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಕ್ರೀಡಾ ತರಬೇತುದಾರರಾದ ಅಶೋಕ್ ಮಂಟೂರ, ರಾಜು ಚವ್ಹಾಣ, ಪ್ರವೀಣ್ ಪುಣೆ, ರೋಹಿಣಿ, ರಾಜೇಶ್, ದಿನೇಶ್, ರಾಜು ಕೆ.ಎಲ್, ಜ್ಯೋತಿ ಗಾಜರೆ, ನರೇಂದ್ರ ಮಂದಡ್ಕರ್, ರಮೇಶ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪುಸ್ತಕ ಪ್ರಾಧಿಕಾರದ ಸದಸ್ಯ ಉಪನ್ಯಾಸಕ ಬಿ.ಎಚ್ ನಿರಗುಡಿ ಕಾರ್ಯಕ್ರಮವನ್ನು ನಿರೂಪಿಸಿದರು.