ಎಲ್ಎಲ್‌ಬಿ ಪರೀಕ್ಷೆ ಬರೆಯಲು ನಾಲ್ಕು ನಿಮಿಷ ತಡವಾಗಿ ಬಂದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ನಿರಾಕರಣೆ: ಆಕ್ರೋಶ
ಕಲಬುರಗಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ವತಿಯಿಂದ ಪ್ರಥಮ, ದ್ವೀತಿಯ ಹಾಗೂ ತೃತೀಯ ವರ್ಷಗಳ ಸೆಮಿಸ್ಟರ್ ಪರೀಕ್ಷೆ ನಡೆಸುತ್ತಿವೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು 30 ನಿಮಿಷ ಮುಂಚೆ ಪರೀಕ್ಷಾ ಕೊಠಡಿಯಲ್ಲಿ ಇರಬೇಕೆಂಬ ನಿಯಮ ಇದೀಗ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮುಳುವಾಗಿದೆ.
ರಾಜ್ಯಾದ್ಯಂತ ಜೂ.16 ರಿಂದ ಆರಂಭವಾಗಿರುವ ಕಾನೂನು ಪದವಿ ಪರೀಕ್ಷೆಗೆ ಏಕಾಏಕಿ ಈ ನಿಯಮ ಮಾಡಿರುವುದರಿಂದ ಜೂ.16 ಮತ್ತು 1ರಂದು ನಡೆದಿರುವ ಮತ್ತು ನಡೆಯುತ್ತಿರುವ ಪರೀಕ್ಷೆಗೆ ಕೇವಲ ಮೂರು-ನಾಲ್ಕು ನಿಮಿಷ ತಡವಾಗಿ ಬಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದೆ ಗೇಟ್ ಗೆ ಕೀಲಿಹಾಕಿ ಅಭ್ಯರ್ಥಿಗಳನ್ನು ಮನೆಗೆ ಕಳಿಸಿ ಪರೀಕ್ಷೆ ಬರೆಯದಂತೆ ಒತ್ತಾಯಪೂರ್ವಕವಾಗಿ ತಡೆಯಲಾಗುತ್ತಿದೆ ಎಂದು ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳು ವಿವಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಿಗ್ಗೆ 9:30ಕ್ಕೆ ಆರಂಭವಾಗುವ ಪರೀಕ್ಷೆಗೆ ಬೆಳಿಗ್ಗೆ 9 ಗಂಟೆಯ ಒಳಗೆ ಪರೀಕ್ಷಾ ಕೊಠಡಿಯಲ್ಲಿರಬೇಕು. ಆದರೆ 9:4 ನಿಮಿಷಕ್ಕೆ ಬಂದರೆ ಕೊಠಡಿ ಒಳಗೆ ಪ್ರವೇಶಕ್ಕೆ ನಿರಾಕರಣೆ ಮಾಡಲಾಗಿದೆ. ಅಲ್ಲದೇ ಮಧ್ಯಾಹ್ನ 2 ಗಂಟೆಗೆ ಆರಂಭವಾಗುವ ಪರೀಕ್ಷೆ ಹಾಜರಾಗಲು 1;30 ಒಳಗೆ ಕೊಠಡಿ ಒಳಗೆ ಇರಬೇಕು. 1:34 ನಿಮಿಷಕ್ಕೆ 4 ನಿಮಿಷ ತಡವಾಗಿ ಬಂದರೂ ಗೇಟ್ ತೆರೆಯದೇ ನೂರಾರು ವಿದ್ಯಾರ್ಥಿಗಳನ್ನು ಮನೆಗೆ ವಾಪಸ್ ಕಳಿಸುತ್ತಿರುವ ಘಟನೆಗಳು ಎಲ್ಲಾ ಪರೀಕ್ಷಾ ಕೇಂದ್ರದಲ್ಲಿ ನಡೆಯುತ್ತಿದೆ ಎಂದು ವಿದ್ಯಾರ್ಥಿಗಳು ವಾರ್ತಾ ಭಾರತಿಗೆ ಮಾಹಿತಿ ನೀಡಿದ್ದಾರೆ.
ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಮೈಸೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತಡವಾಗಿರುವುದಕ್ಕೆ ಕ್ಷಮೆ ಕೋರಿ, ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡರು. ಹಾಲ್ ಟಿಕೆಟ್ ನಲ್ಲಿ ಸೂಚಿಸುವ ಸಮಯದಲ್ಲಿ ಬಂದವರಿಗೆ ಮಾತ್ರ ಅವಕಾಶ ನೀಡುವ ನಿಯಮವನ್ನು ಪಾಲನೆ ಮಾಡುತ್ತಿದ್ದೇವೆ ಎಂದು ಕಾಲೇಜು ಸಿಬ್ಬಂದಿ ತಿಳಿಸಿದ್ದಾರೆ.
ವಿಶ್ವ ವಿದ್ಯಾಲಯದ ಈ ನೂತನ ನಿಯಮದಿಂದ ನೂರಾರು ವಿದ್ಯಾರ್ಥಿಗಳು ನಿರಾಸೆಯಿಂದ ಹಿಂತಿರುಗಬೇಕಾಯಿತು. 'ಇದು ಆನ್‌ಲೈನ್ ಪರೀಕ್ಷೆ ಯಾದ್ದರಿಂದ ನಿಗದಿತ ಸಮಯದೊಳಗೆ ಆಗಮಿಸಿದ ವಿದ್ಯಾರ್ಥಿಗಳಿಗಷ್ಟೇ ಪ್ರಶ್ನೆ ಪತ್ರಿಕೆಯನ್ನು ಡೌನ್‌ಲೋಡ್ ಮಾಡಿಕೊಡಬೇಕಿದೆ. ತಡವಾಗಿ ಬಂದವರಿಗೆ ಹೆಚ್ಚುವರಿಯಾಗಿ ಪ್ರಶ್ನೆ ಪತ್ರಿಕೆ ಪಡೆಯಲು ಅವಕಾಶವಿರುವುದಿಲ್ಲ. ಪ್ರವೇಶ ಪತ್ರದಲ್ಲಿಯೂ ಈ ವಿಷಯ ನಮೂದಾಗಿದೆ. ನಿಯಮಾವಳಿಯಂತೆ ಪ್ರವೇಶ ನಿರಾಕರಿಸಲಾಗಿದೆ,'' ಎಂದು ಕಾಲೇಜಿನ ಪ್ರಾಂಶುಪಾಲರೊಬ್ಬರು ಸ್ಪಷ್ಟನೆ ನೀಡಿದ್ದಾರೆ.
ಪರೀಕ್ಷೆ ಬರೆಯಲು ಅವಕಾಶ ನೀಡದಿರುವುದರಿಂದ ಮತ್ತೆ ಪರೀಕ್ಷೆ ಬರೆಯಲು 6 ತಿಂಗಳು ಕಾಯಬೇಕು. ತಕ್ಷಣ ಈ ನಿಯಮವನ್ನು ಕೈಬಿಟ್ಟು ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಅವಕಾಶ ನೀಡದೆ ವಾಪಸ್ ಕಳಿಸಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳು ಕೆ.ಎಸ್.ಎಲ್.ಯು ಕುಲಪತಿಗೆ ಆಗ್ರಹಿಸಿದ್ದಾರೆ.