×
Ad

'ವಿಬಿ. ಜಿ- ರಾಮ್- ಜಿ' ಕಾಯ್ದೆ 'ನಾಥೂರಾಮ ಗೋಡ್ಸೆ ಕಾಯ್ದೆ' : ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

Update: 2026-01-10 14:23 IST

ಕಲಬುರಗಿ: "ಕೇಂದ್ರದಲ್ಲಿ ಜಾರಿ ಮಾಡುತ್ತಿರುವ ವಿಬಿ ಜಿ- ರಾಮ್- ಜಿ ಕಾಯ್ದೆ ದಶರಥನ ರಾಮನೂ ಅಲ್ಲ, ಸೀತಾರಾಮನೂ ಅಲ್ಲ. ಅದು ನಾಥೂರಾಮ ಗೋಡ್ಸೆ ಕಾಯ್ದೆಯಾಗಿದೆ" ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ನಗರದ ಐವಾನ್ - ಎ- ಶಾಹಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಥೂರಾಮ ಎಂದರೆ ಅದು ಆರೆಸ್ಸೆಸ್ ತತ್ವದ ರಾಮ. ಆರೆಸ್ಸೆಸ್ ತತ್ವಗಳು ಹೇಗಿರುತ್ತವೆ ಎಂದು ಎಲ್ಲರಿಗೂ ಗೊತ್ತಿದೆ. ಅವು ಬಡವರ ವಿರುದ್ಧ, ಧರ್ಮದ ನಶೆಯಲ್ಲಿ ಜನರನ್ನು ತೇಲಾಡಿಸುವುದು ಆಗಿದೆ ಎಂದು ಟೀಕಿಸಿದರು.

ಕೇಂದ್ರ ಸರ್ಕಾರದ ವಿ.ಬಿ ಜಿ- ರಾಮ್- ಜಿ ಕಾಯ್ದೆ ಸಂವಿಧಾನ ವಿರೋಧಿಯಾಗಿದ್ದು, ಅದರ ವಿರುದ್ದ ರಾಜ್ಯ ಸರ್ಕಾರ ಈಗಾಗಲೇ ನಿರ್ಣಯ ಕೈಗೊಂಡಿದೆ. ಜೊತೆಗೆ ಕಾನೂನು ಹೋರಾಟ ರೂಪಿಸುತ್ತಿದೆ ಎಂದ ಅವರು, ಇದರ ಬಗ್ಗೆ ಚರ್ಚೆಗೆ ಎರಡು ದಿನಗಳ ವಿಶೇಷ ಅಧಿವೇಶನ ಕರೆಯಲು ನಿರ್ಧರಿಸಲಾಗಿದೆ. ಬಿಜೆಪಿಗರು ತಮ್ಮ ವಿಚಾರ ಹೇಳಲಿ. ನಾವು ನಮ್ಮ ವಿಚಾರ ಹೇಳುತ್ತೇವೆ. ಇದರ ಜೊತೆಗೆ ಕಾನೂನು ಹೋರಾಟ ರೂಪಿಸಲಾಗುತ್ತಿದೆ. ರಾಜ್ಯ ಸರ್ಕಾರ ದೊಂದಿಗೆ ಮಹಿಳಾ ಸಂಘಟನೆಗಳು, ಕೂಲಿ ಕಾರ್ಮಿಕರ ಸಂಘಟನೆಗಳು ಕೈಜೋಡಿಸಲು ಮುಂದಾಗಿವೆ. ಮೂರು ಕೃಷಿ‌ಕಾಯ್ದೆಗಳು ವಾಪಸ್ ಪಡೆದಂತೆ ಇದು ಕೂಡಾ ವಾಪಸ್ ಆಗಲಿದೆ ಎಂದರು.

ಈ ಹಿಂದಿನ ನರೇಗಾ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ, ಅದನ್ನು ತಡೆಯಲು ಹೊಸ ಕಾಯ್ದೆ ಜಾರಿಯಾಗಿದೆ ಎಂದು ಬಿಜೆಪಿ ಹೇಳುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, “ದಿನಕ್ಕೆ ಸುಮಾರು 12 ಕೋಟಿ ಕಾರ್ಮಿಕರು ಕೆಲಸ ಮಾಡುವಂತಹ ಯೋಜನೆ ಅದು. ಸಾವಿರಾರು ಕುಟುಂಬಗಳ ಜೀವನಾಧಾರವಾಗಿತ್ತು. ಇಂತಹ ಬೃಹತ್ ಯೋಜನೆಯಲ್ಲಿ ಎಲ್ಲೋ ಒಂದೆರಡು ಕಡೆ ತಪ್ಪುಗಳಾದರೆ, ಇಡೀ ಯೋಜನೆಯನ್ನೇ ರದ್ದು ಮಾಡಬೇಕೇ? ನೆಗಡಿ ಬಂದರೆ ಮೂಗನ್ನೇ ಕತ್ತರಿಸಿಕೊಳ್ಳಬೇಕಾ? ಪ್ರಧಾನಮಂತ್ರಿ ಕೌಶಲ್ಯ ಯೋಜನೆಯಲ್ಲಿ ಸುಮಾರು 14,500 ಕೋಟಿ ರೂ. ಅವ್ಯವಹಾರವಾಗಿದೆ ಎಂದು ವರದಿಯಿದೆ. ಹಾಗಾದರೆ ಅದನ್ನು ಯಾಕೆ ರದ್ದುಪಡಿಸಲಿಲ್ಲ?” ಎಂದು ಪ್ರಶ್ನಿಸಿದರು.

11 ವರ್ಷಗಳಿಂದ ಭ್ರಷ್ಟಾಚಾರ ನಡೆದಿಲ್ಲವೇ?

ನರೇಗಾ ಕಾಯ್ದೆ ಜಾರಿಗೆ ಬಂದು 20 ವರ್ಷಗಳಾಗಿವೆ. ಕಳೆದ 11 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿತ್ತು. ಅಷ್ಟು ವರ್ಷಗಳಲ್ಲಿ ಭ್ರಷ್ಟಾಚಾರ ನಡೆದಿದ್ದರೆ ವಿರೋಧಿಸದೇ ಏನು ಮಾಡುತ್ತಿದ್ದರು? ಆಗಲೂ ಅವರಿಗೆ ಪಾಲು ಹೋಗಿತ್ತಾ? ಇಲ್ಲವೇ ಈಗ ಹೋಗುವ ಪಾಲು ಕಡಿಮೆಯಾಗುತ್ತಿದೆಯೇ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.

ರಾಜ್ಯಪಾಲರಿಂದ ಬಿಲ್ ತಡೆ ಸರಿಯಲ್ಲ

ದ್ವೇಷ ಭಾಷಣ ವಿರೋಧಿ ಬಿಲ್ ರಾಜ್ಯಪಾಲರ ಬಳಿ ಬಾಕಿಯಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ರಾಜ್ಯ ಸರ್ಕಾರದ ಕೆಲವು ಬಿಲ್ಲುಗಳು ಪಾಸಾಗಿವೆ, ಕೆಲವು ಇನ್ನೂ ರಾಜ್ಯಪಾಲರ ಬಳಿ ಉಳಿದಿವೆ. ಸಲಹೆ ಅಥವಾ ತಿದ್ದುಪಡಿ ಬೇಕಿದ್ದರೆ ಸೂಚಿಸಲಿ. ಆದರೆ ರಾಜಕೀಯ ದುರುದ್ದೇಶದಿಂದ ಬಿಲ್ಲುಗಳನ್ನು ತಡೆಹಿಡಿಯುವುದು ಸರಿಯಲ್ಲ” ಎಂದರು.

ಬಿಜೆಪಿ ಯಾವಾಗಲೂ ಮೀಸಲಾತಿ ವಿರೋಧಿ

“ಬಿಜೆಪಿ ಪಕ್ಷ ಮೊದಲಿನಿಂದಲೂ ಮೀಸಲಾತಿಗೆ ವಿರೋಧಿಯಾಗಿದೆ. ಒಳಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ತೀರ್ಮಾನವನ್ನು ರಾಜ್ಯ ಸರ್ಕಾರಗಳಿಗೆ ಬಿಟ್ಟಿದೆ. ಈ ವಿಚಾರದಲ್ಲಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ” ಎಂದು ಹೇಳಿದರು.

ಅಕ್ರಮ ಬಾಂಗ್ಲಾ ವಲಸೆ ತಡೆಯುವವರು ಯಾರು?

ಅಕ್ರಮ ಬಾಂಗ್ಲಾ ವಲಸೆಗಾರರ ಕುರಿತು ಪ್ರಶ್ನೆಗೆ ಉತ್ತರಿಸಿದ ಸಚಿವರು, “ಅಕ್ರಮ ವಲಸೆ ತಡೆಯುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಪಾಕಿಸ್ತಾನದ ಭಯೋತ್ಪಾದಕರು ಹಾಗೂ ಬಾಂಗ್ಲಾದೇಶದ ಪ್ರಜೆಗಳು ಗಡಿ ದಾಟಿ ಬರಬೇಕಾದರೆ, ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಿಂದಲೇ ಬರುತ್ತಿದ್ದಾರೆ. ಒಳನುಸುಳುವಿಕೆಯನ್ನು ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ತಡೆಯಬೇಕು. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ” ಎಂದು ಕಿಡಿಕಾರಿದರು.

ಆರ್‌ಒ ಪ್ಲಾಂಟ್‌ಗಳ ನಿರ್ವಹಣೆಗೆ ನೀಲಿ ನಕ್ಷೆ

ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವ ಆರ್‌ಒ ಪ್ಲಾಂಟ್‌ಗಳ ನಿರ್ವಹಣೆಗೆ ನೀಲಿ ನಕ್ಷೆ ತಯಾರಿಸಲಾಗುತ್ತಿದೆ ಎಂದು ತಿಳಿಸಿದ ಅವರು, “ಈ ಹಿಂದೆ ಸಿಎಸ್‌ಆರ್ ನಿಧಿಯಿಂದ ಸ್ಥಾಪಿಸಿದ ಆರ್‌ಒ ಪ್ಲಾಂಟ್‌ಗಳ ನಿರ್ವಹಣೆ ಗ್ರಾಪಂಗಳಿಗೆ ವಹಿಸಲಾಗಿತ್ತು. ಇದರಿಂದ ಸಮಸ್ಯೆ ಉಂಟಾಗುತ್ತಿತ್ತು. ಕಂಪನಿಗಳೊಂದಿಗೆ ಚರ್ಚೆ ನಡೆಸಿದರೂ ಅವರು ಮುಂದಾಗಿಲ್ಲ. ಆದರೂ ಹೊಸ ತಂತ್ರಜ್ಞಾನ ಬಳಸಿ ನೀರಿನ ಮರುಬಳಕೆ ಹಾಗೂ ಸಂರಕ್ಷಣೆಗೆ ಸಮಗ್ರ ಯೋಜನೆ ರೂಪಿಸಲಾಗುವುದು” ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ. ಅಜಯ್ ಸಿಂಗ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಖನೀಜ್ ಫಾತಿಮಾ, ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ಕುಡಾ ಅಧ್ಯಕ್ಷ ಮಜಹರ್ ಖಾನ್ ಆಲಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News