ವಾಡಿ: ಕೆಕೆಆರ್‌ಟಿಸಿ ಬಸ್‌ವೊಂದು ರಸ್ತೆಯ ಮಧ್ಯೆ ಇರಿಸಲಾಗಿದ್ದ ಬ್ಯಾರೆಲ್‌ಗೆ ಢಿಕ್ಕಿ ಹೊಡೆದ ಪರಿಣಾಮ, ಬ್ಯಾರೆಲ್‌ನಲ್ಲಿದ್ದ ಕಬ್ಬಿಣದ ಧ್ವಜ ಕಂಬವೊಂದು ಸ್ಕೂಟರ್‌ನ ಹಿಂಬದಿ ಸವಾರನ ಮೇಲೆ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಪಟ್ಟಣದ ಶ್ರೀನಿವಾಸ ಗುಡಿ ವೃತ್ತದಲ್ಲಿ ಬುಧವಾರ ನಡೆದಿದೆ.

ಮೃತರನ್ನು ಪಟ್ಟಣದ ಪಿಲಕಮ್ಮ ಏರಿಯಾ ಬಡಾವಣೆ ನಿವಾಸಿ ಮಹಮ್ಮದ್ ಯಾಸೀನ್ (22) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಸ್ಕೂಟರ್‌ ಚಾಲನೆ ಮಾಡುತ್ತಿದ್ದ ಮಹಮ್ಮದ್ ಶಾಹಿದ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಯಾದಗಿರಿಯಿಂದ ಕಲಬುರಗಿ ಕಡೆಗೆ ತೆರಳುತ್ತಿದ್ದ ಕೆಕೆಆರ್‌ಟಿಸಿ ಬಸ್‌ ಶ್ರೀನಿವಾಸ ಗುಡಿ ವೃತ್ತದ ಬಳಿ ನಿಯಂತ್ರಣ ತಪ್ಪಿ ರಸ್ತೆಯ ಮಧ್ಯೆ ಇರಿಸಲಾಗಿದ್ದ ಬ್ಯಾರೆಲ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಬ್ಯಾರೆಲ್‌ನಲ್ಲಿ ಇರಿಸಲಾಗಿದ್ದ ಭಾರೀ ಕಬ್ಬಿಣದ ಕಂಬವು ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಸ್ಕೂಟರ್‌ನ ಹಿಂಬದಿ ಕುಳಿತಿದ್ದ ಯಾಸೀನ್ ಅವರ ತಲೆಯ ಮೇಲೆ ಬಿದ್ದಿದೆ.

ಕಂಬ ಬಿದ್ದ ಪರಿಣಾಮ ಯಾಸೀನ್ ಅವರ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ತಕ್ಷಣ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರಾದರೂ, ಮಾರ್ಗಮಧ್ಯೆಯೇ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್‌ಐ ತಿರುಮಲೇಶ ಕೆ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor