ಕಲಬುರಗಿ | ಉದ್ಯೋಗ ಖಾತರಿ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ : ಹರ್ಷಾ ಗುತ್ತೇದಾರ
ಕಲಬುರಗಿ: ಆಳಂದ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳಲ್ಲಿ ಕೈಗೊಂಡಿರುವ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ನಿಯಮಾವಳಿಗಳನ್ನು ಮೀರಿ ವ್ಯಾಪಕ ಭ್ರಷ್ಟಾಚಾರ ಎಸಗಲಾಗುತ್ತಿದೆ, ಕೂಡಲೇ ತಾಲೂಕಿನ ಎಲ್ಲ ಗ್ರಾಮ ಪಂಚಾಯತ್ ಗಳ ಉದ್ಯೋಗ ಖಾತರಿ ಯೋಜನೆಯನ್ನು ತಡೆ ಹಿಡಿಯಬೇಕು ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾ ಗುತ್ತೇದಾರ ಒತ್ತಾಯಿಸಿದ್ದಾರೆ.
ಬುಧುವಾರ ನಸೀರವಾಡಿ ಗ್ರಾಮಕ್ಕೆ ತೆರಳಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೈಗೊಂಡಿರುವ ತೆರೆದ ಬಾವಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದ ಅವರು, ತಾಲೂಕಿನ ಗ್ರಾ.ಪಂ.ಗಳ ಉದ್ಯೋಗ ಖಾತರಿ ಯೋಜನೆಯ ಕ್ರಿಯಾಯೋಜನೆಯನ್ನು ಶಾಸಕ ಬಿ.ಆರ್.ಪಾಟೀಲ್ ಮತ್ತು ಅವರ ಅಣ್ಣನ ಮಗ ಆರ್ ಕೆ ಪಾಟೀಲ ಹೇಳಿದಂತೆ ಅನುಮೋದನೆ ನೀಡಲಾಗಿದೆ ಎಂದು ಆಪಾದಿಸಿದ್ದಾರೆ.
ಕಾರ್ಮಿಕರನ್ನು ಬಳಸದೇ ಯಂತ್ರಗಳನ್ನು ಬಳಸಿ ನರೇಗಾ ಅಡಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಗ್ರಾಮದಲ್ಲಿ ವಾಸ ಆಗದೆ ಇರುವವರ ಹೆಸರನ್ನು, ವಿದ್ಯಾರ್ಥಿಗಳ ಹೆಸರನ್ನು, ಅರೆ ಸರ್ಕಾರಿ ನೌಕರರ ಹೆಸರನ್ನು ಹಾಜರಿಯಲ್ಲಿ ಹಾಕಿ ವ್ಯಾಪಕ ಭ್ರಷ್ಟಾಚಾರ ಎಸಗಲಾಗುತ್ತಿದೆ. ಕೇವಲ ತಮ್ಮ ಪಕ್ಷದ ಮುಖಂಡರ, ಕಾರ್ಯಕರ್ತರ ಹೊಲಗಳಲ್ಲಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಕೂಡಲೇ ಈ ಎಲ್ಲ ಕಾಮಗಾರಿಗಳನ್ನು ತಡೆ ಹಿಡಿದು ಮತ್ತೊಮ್ಮೆ ಕ್ರಿಯಾಯೋಜನೆ ತಯಾರಿಸಿ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ವಿಸ್ಕೃತ ದೂರನ್ನು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಲಾಗುವುದು ಅಲ್ಲದೇ ಕೂಡಲೇ ಕಾಮಗಾರಿಗಳನ್ನು ತಡೆ ಹಿಡಿಯದಿದ್ದರೇ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಯ ಮುಂದೆ ಸತ್ಯಾಗ್ರಹ ಕೈಗೊಳ್ಳಲಾಗುವುದು ಆಗ್ರಹಿಸಿದ್ದಾರೆ.