ಉಚಿತ ಕಾನೂನು ನೆರವು ಒದಗಿಸಲು ಲೀಗಲ್ ಏಡ್ ಡಿಫೆನ್ಸ್ ಕೌನ್ಸಿಲ್ ಸಿಸ್ಟಮ್ : ಹಿರಿಯ ಸಿವಿಲ್ ನ್ಯಾಯಾಧೀಶೆ ಶೋಭಾ

Update: 2023-07-17 16:10 GMT

ಮಂಗಳೂರು, ಜು.17: ಉಚಿತವಾಗಿ ಕಾನೂನು ನೆರವು ನೀಡಲು ಜಿಲ್ಲಾ ಮಟ್ಟದಲ್ಲಿ ಲೀಗಲ್ ಏಡ್ ಡಿಫೆನ್ಸ್ ಕೌನ್ಸಿಲ್ ಸಿಸ್ಟಮ್ ಸ್ಥಾಪನೆಗೊಂಡಿದ್ದು, ದುರ್ಬಲರು ಮತ್ತು ಮಹಿಳೆಯರು ಈ ವ್ಯವಸ್ಥೆಯ ಮೂಲಕ ಉಚಿತವಾಗಿ ಕಾನೂನು ನೆರವು ಪಡೆಯಬಹುದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾ ಧೀಶೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ಶೋಭಾ ಬಿ.ಜಿ. ತಿಳಿಸಿದ್ದಾರೆ.

ಮಂಗಳೂರು ನಗರ ಸಂಚಾರ ಪೊಲೀಸ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘ ಮಂಗಳೂರು ಇವುಗಳ ಸಂಯುಕ್ತ ಆಶ್ರಯ ದಲ್ಲಿ ವೆಲೆನ್ಸಿಯಾದ ರೋಶನಿ ನಿಲಯದಲ್ಲಿ ಸೋಮವಾರ ನಡೆದ ಮೋಟಾರು ಕಾಯ್ದೆಗಳ ತಿದ್ದುಪಡಿ ಕಾಯ್ದೆ ಮತ್ತು ಮೋಟಾರು ವಾಹನಗಳ ತಿದ್ದುಪಡಿ ನಿಯಮಗಳು 2022ರ ಕಾನೂನು ಅರಿವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಲೀಗಲ್ ಆ್ಯಡ್ ಡಿಫೆನ್ಸ್ ಕೌನ್ಸಿಲ್ ಸಿಸ್ಟಮ್‌ನಲ್ಲಿ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಸದಸ್ಯರಾಗಿ ಮೂರು ಮಂದಿ ವಕೀಲರು ಇರುತ್ತಾರೆ. 10 ವರ್ಷ ಕ್ರಿಮಿನಲ್ ವಕೀಲರಾಗಿ ಸೇವೆ ಸಲ್ಲಿಸಿದವರು ಸಮಿತಿಯಲ್ಲಿ ಚೀಫ್ ಡಿಫೆನ್ಸ್ ಆಗಿರುತ್ತಾರೆ ಎಂದು ಮಾಹಿತಿ ನೀಡಿದರು.

ಹಿಂದೆ ಕಾನೂನು ಪ್ರಾಧಿಕಾರದ ಮುಂದೆ ಬರುವ ಪ್ರಕರಣಗಳ ಇತ್ಯರ್ಥಕ್ಕೆ ಪ್ಯಾನೆಲ್ ವಕೀಲರು ಇರುತ್ತಿದ್ದರು. ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಪ್ಯಾನೆಲ್‌ನ ವಕೀಲರಿಗೆ ಹಂಚಿಕೆ ಮಾಡಲಾಗುತ್ತಿತ್ತು. ಆದರೆ ಕೆಲವು ಕಡೆ ಈ ವ್ಯವಸ್ಥೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸಮರ್ಥವಾದ ಲೀಗಲ್ ಆ್ಯಡ್ ಡಿಫೆನ್ಸ್ ಕೌನ್ಸಿಲ್ ಸಿಸ್ಟಮ್‌ನ್ನು ಸರಕಾರ ಜಾರಿಗೆ ತಂದಿದೆ. ಇದರ ಮೂಲಕ ಕಾನೂನಿನ ನೆರವು ಪಡೆಯಲು ಅರ್ಹರಾ ದವರು ಯಾವುದೇ ಕಾನೂನು ಶುಲ್ಕ ಪಾವತಿಸಬೇಕಾಗಿಲ್ಲ. ಸರಕಾರ ಇವರಿಗೆ ವೇತನವನ್ನು ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.

ಡಿಫೆನ್ಸ್ ಕೌನ್ಸಿಲ್‌ನಲ್ಲಿ ಸದಸ್ಯರ ಸಂಖ್ಯೆ ಕಡಿಮೆ ಇರುವುದರಿಂದ ಅವರ ದಿನನಿತ್ಯ ಕಾರ್ಯವೈಖರಿಯ ಕಡೆಗೆ ಗಮನ ಹರಿಸಲು ಕಾನೂನು ಸೇವಾ ಪ್ರಾಧಿಕಾರಕ್ಕೆ ಹೆಚ್ಚು ಅನುಕೂಲವಾಗಿದೆ ಎಂದು ನುಡಿದರು.

ಎಲ್ಲ ಕಾನೂನುಗಳ ಮೂಲ ತಾಯಿ ಸಂವಿಧಾನವಾಗಿದೆ. ಮೋಟಾರ್ ವಾಹನಗಳ ಕಾಯ್ದೆ ತಿದ್ದುಪಡಿ ಉದ್ದೇಶವೆನೆಂದರೆ ನೊಂದವರಿಗೆ ತ್ವರಿತವಾಗಿ ಪರಿಹಾರ ಒದಗಿಸುವುದಾಗಿದೆ ಎಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರು ಮಾತನಾಡಿ ಮೋಟಾರು ಕಾಯ್ದೆಗಳ ತಿದ್ದುಪಡಿ ಕಾಯ್ದೆ ಮತ್ತು ಮೋಟಾರು ವಾಹನಗಳ ತಿದ್ದುಪಡಿ ನಿಯಮಗಳ ಬಗ್ಗೆ ಆಯುಕ್ತಾಲಯದ ಪ್ರತಿಯೊಂದು ಪೊಲೀಸ್ ಠಾಣೆಗಳಲ್ಲಿ ಪೊಲೀಸರಿಗೆ ತಜ್ಞ ವಕೀಲರಿಂದ ಮಾಹಿತಿ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗುವುದು, ಇದರಿಂದ ಪೊಲೀಸರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸಂಪನ್ಮೂಲ ವ್ಯಕ್ತಿಯಾಗಿ ವಕೀಲರಾದ ಕೆ.ಎಸ್.ಎನ್ ಅಡಿಗ ಮೋಟಾರು ಕಾಯ್ದೆಗಳ ತಿದ್ದುಪಡಿ ಕಾಯ್ದೆ ಮತ್ತು ಮೋಟಾರು ವಾಹನಗಳ ತಿದ್ದುಪಡಿ ನಿಯಮಗಳು 2022ರ ಬಗ್ಗೆ ಮಾಹಿತಿ ನೀಡಿದರು.

ಡಿಸಿಪಿ ದಿನೇಶ್ ಕುಮಾರ್ ಬಿ.ಪಿ. ದಿನೇಶ್ ಕುಮಾರ್, ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯ ಇದರ ಅಧ್ಯಕ್ಷೆ ವಿದಾ ಸಿಕ್ವೇರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎಸಿಪಿ ಗೀತಾ ಡಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಟ್ರಾಫಿಕ್ ದಕ್ಷಿಣ ಠಾಣೆಯ ಪೊಲೀಸ್ ನಿರೀಕ್ಷರಾದ ರಮೇಶ್ ಹನಾಪುರ ಸ್ವಾಗತಿಸಿದರು. ಟ್ರಾಫಿಕ್ ಉತ್ತರ ಠಾಣೆಯ ಪೊಲೀಸ್ ನಿರೀಕ್ಷಕರಾದ ಸುರೇಶ್ ಕುಮಾರ್ ವಂದಿಸಿದರು. ವಿದ್ಯಾರ್ಥಿ ಶಿವಾನಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News