ಕಾಸರಗೋಡು | ಚಾಲಕನ ನಿಯಂತ್ರಣ ತಪ್ಪಿ ಮೀನು ಸಾಗಾಟದ ಲಾರಿ ಪಲ್ಟಿ
Update: 2025-11-14 11:10 IST
ಕಾಸರಗೋಡು: ಮೀನು ಸಾಗಾಟದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್ ಪುತ್ತೂರಿನಲ್ಲಿ ಗುರುವಾರ ರಾತ್ರಿ ನಡೆದಿದೆ.
ಕೋಜಿಕ್ಕೋಡ್ ನಿಂದ ಉಳ್ಳಾಲಕ್ಕೆ ತೆರಳುತ್ತಿದ್ದ ಲಾರಿ ಟಯರ್ ಸ್ಪೋಟಗೊಂಡ ಹಿನ್ನೆಲೆಯಲ್ಲಿ ರಸ್ತೆಗೆ ಮಗುಚಿ ಬಿದ್ದಿದೆ ಎನ್ನಲಾಗಿದೆ.
ಚಾಲಕ ವಿಜಿನ್ ಕುಮಾರ್ (35) ಸಣ್ಣ ಪುಟ್ಟ ಗಾಯ ಗಳೊಂದಿಗೆ ಪಾರಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಕ್ರೇನ್ ಮೂಲಕ ಲಾರಿಯನ್ನು ಮೇಲಕ್ಕೆತ್ತಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೀನುಗಳನ್ನು ಇತರ ಎರಡು ವಾಹನಗಳಿಗೆ ತುಂಬಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಅಪಘಾತದ ಬಳಿಕ ಎರಡು ಗಂಟೆ ಅಧಿಕ ಸಮಯ ಕಾಸರಗೋಡು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.