ಕುಂಬಳೆ | ಹೈಕೋರ್ಟ್ ವಿಚಾರಣೆಯ ನಡುವೆಯೇ ಟೋಲ್ ಆರಂಭಕ್ಕೆ ಯತ್ನ; ಜಿಲ್ಲಾಧಿಕಾರಿಗಳ ನಡೆ ಜನವಿರೋಧಿ : ಶಾಸಕ ಎ.ಕೆ.ಎಂ ಅಶ್ರಫ್ ಆರೋಪ
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಆರಿಕ್ಕಾಡಿಯಲ್ಲಿ ಡಿ.27 ರಿಂದ ಶುಲ್ಕ ವಸೂಲಿಗೆ ರಹಸ್ಯ ಹುನ್ನಾರ ನಡೆಯುತ್ತಿದ್ದು, ಜನರ ಪರ ನಿಲ್ಲಬೇಕಾದ ಜಿಲ್ಲಾಧಿಕಾರಿಗಳೇ ಇದಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಆರೋಪಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ತಲಪಾಡಿಯಲ್ಲಿ ಟೋಲ್ ಗೇಟ್ ಕಾರ್ಯಾಚರಿಸುತ್ತಿದೆ. ಅಲ್ಲಿಂದ ಕೇವಲ 23 ಕಿ ಮೀ ದೂರದ ಕುಂಬಳೆಯಲ್ಲಿ ಅವೈಜ್ಞಾನಿಕವಾಗಿ ಇನ್ನೊಂದು ಟೋಲ್ ಗೇಟ್ ಪ್ರಾರಂಭಿಸುವುದನ್ನು ವಿರೋಧಿಸಿ ನಾಗರಿಕ ಕ್ರಿಯಾ ಸಮಿತಿ ನೀಡಿದ ದೂರಿನಂತೆ ಹೖಕೋರ್ಟಿನಲ್ಲಿ ಪ್ರಕರಣ ವಿಚಾರಣೆಯಲ್ಲಿದ್ದು,ನ್ಯಾಯಾಲಯ ಈ ವಿಷಯದಲ್ಲಿ ಅಂತಿಮ ತೀರ್ಪು ನೀಡಿಲ್ಲ. ಜನವರಿ 25ಕ್ಕೆ ಪ್ರಕರಣದ ವಿಚಾರಣೆ ಕಾಯ್ದಿರಿಸಲಾಗಿದೆ. ಈ ಮಧ್ಯೆ ನಾಗರಿಕ ಕ್ರಿಯಾ ಸಮಿತಿ ಕಾರ್ಯಕರ್ತರೊಂದಿಗೆ ಜಿಲ್ಲಾಧಿಕಾರಿಗಳ ಭೇಟಿಗೆ ಹೋದಾಗ ಜನರ ದೂರು, ಆಕ್ಷೇಪ ಆಲಿಸಬೇಕಾದ ಅವರು ರಾ. ಹೆದ್ದಾರಿ ಪರವಾಗಿ ಮಾತನಾಡಿ, ಶಾಸಕರನ್ನೂ, ಕ್ರಿಯಾ ಸಮಿತಿಯನ್ನೂ ಆಕ್ಷೇಪಿಸಿದರೆಂದು ಶಾಸಕ ಎಕೆಎಂ ಅಶ್ರಫ್ ದೂರಿದ್ದಾರೆ.
ಜಿಲ್ಲಾಧಿಕಾರಿಗಳ ವರ್ತನೆ ಜನವಿರೋಧಿಯಾಗಿದ್ದು, ಈ ಕುರಿತು ರಾಜ್ಯ ಮುಖ್ಯಮಂತ್ರಿ ಹಾಗೂ ಕಾರ್ಯದರ್ಶಿಗೆ ದೂರು ಸಲ್ಲಿಸುವುದಾಗಿ ಶಾಸಕರು ತಿಳಿಸಿದ್ದಾರೆ. ಕುಂಬಳೆಯಲ್ಲಿ ಟೋಲ್ ಸಂಗ್ರಹ ಆರಂಭಿಸುವುದರ ವಿರುದ್ಧ ಬಿಜೆಪಿ ಹೊರತು ಉಳಿದೆಲ್ಲ ಪಕ್ಷದವರನ್ನು ಒಳಗೊಂಡ ಕ್ರಿಯಾ ಸಮಿತಿ ಹೋರಾಟದಲ್ಲಿದೆ. ಕಾನೂನು ವಿರುದ್ಧವಾಗಿ ಟೋಲ್ ಶುಲ್ಕ ವಸೂಲಾತಿಗೆ ಮುಂದಾದರೆ ಕ್ರಿಯಾ ಸಮಿತಿ ಅದನ್ನು ತಡೆಯುವುದಾಗಿ ಶಾಸಕರು ಪ್ರಕಟನೆಯಲ್ಲಿ ಹೇಳಿದ್ದಾರೆ.