×
Ad

ಮಂಜೇಶ್ವರ: ಕುಂಬಳೆ ಟೋಲ್ ವಸೂಲಿಗೆ ವಿರೋಧ; ಶಾಸಕ ಎಕೆಎಂ ಅಶ್ರಫ್ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭ

Update: 2026-01-13 13:52 IST

ಮಂಜೇಶ್ವರ: ಕಾಸರಗೋಡು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುಂಬಳೆಯಲ್ಲಿ ಸ್ಥಾಪಿಸಲಾದ ಟೋಲ್ ಗೇಟ್‌ನಲ್ಲಿ ಟೋಲ್ ಶುಲ್ಕ ವಸೂಲಿಗೆ ವಿರೋಧವಾಗಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ನೇತೃತ್ವದಲ್ಲಿ ಹೋರಾಟ ಸಮಿತಿ ವತಿಯಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಗೊಂಡಿದೆ.

ತಲಪಾಡಿ ಟೋಲ್ ಗೇಟ್‌ನಿಂದ ಕೇವಲ 23 ಕಿ.ಮೀ. ದೂರದಲ್ಲಿ ಕುಂಬಳೆಯಲ್ಲಿ ಹೊಸ ಟೋಲ್ ಪ್ಲಾಝಾ ಸ್ಥಾಪಿಸಿ ಟೋಲ್ ವಸೂಲಿ ಆರಂಭಿಸಿರುವುದು ಕಾನೂನುಬಾಹಿರವಾಗಿದೆ ಎಂದು ಸತ್ಯಾಗ್ರಹ ಉದ್ಘಾಟಿಸಿ ಮಾತನಾಡಿದ ಶಾಸಕರು ಆರೋಪಿಸಿದರು. ಒಂದು ಟೋಲ್ ಗೇಟ್‌ನಿಂದ ಮತ್ತೊಂದು ಟೋಲ್ ಗೇಟ್‌ಗೆ ಕನಿಷ್ಠ 60 ಕಿ.ಮೀ. ಅಂತರ ಇರಬೇಕೆಂಬ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದರು.

ಈ ಟೋಲ್ ವಸೂಲಿ ಬಿಜೆಪಿ ಜನತೆಗೆ ನೀಡಿದ “ಕೊಡುಗೆ”ಯಾಗಿದೆ ಎಂದು ಆರೋಪಿಸಿದ ಅವರು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಟೋಲ್ ತೆರವುಗೊಳಿಸಬಹುದಾಗಿದ್ದರೂ, ಮಂಜೇಶ್ವರದಲ್ಲಿ ಸೋಲುಂಟಾಗುತ್ತಿರುವ ಕಾರಣ ಬಿಜೆಪಿ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು. ಜತೆಗೆ ಟೋಲ್ ವಿರೋಧಿ ಹೋರಾಟದಲ್ಲೂ ಬಿಜೆಪಿ ಭಾಗವಹಿಸಿಲ್ಲ ಎಂದರು.

ಸತ್ಯಾಗ್ರಹದ ಮೊದಲ ದಿನ ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನ್ ಭಾಗವಹಿಸಿದರು. ಜಿಲ್ಲಾ ಪಂಚಾಯತ್ ಸದಸ್ಯ ಅಝೀಝ್ ಕಳತ್ತೂರು, ಬ್ಲಾಕ್ ಪಂಚಾಯತ್ ಸದಸ್ಯರಾದ ಅಶ್ರಫ್ ಕಾರ್ಲೆ, ಪೃಥ್ವೀರಾಜ್ ಶೆಟ್ಟಿ, ಲಕ್ಷ್ಮಣ ಪ್ರಭು ಕುಂಬಳೆ ಸೇರಿದಂತೆ ವಿವಿಧ ಪಕ್ಷಗಳ ಹೋರಾಟ ಸಮಿತಿ ನಾಯಕರು ಉಪಸ್ಥಿತರಿದ್ದರು.

ಅನಿರ್ದಿಷ್ಟಾವಧಿ ಸತ್ಯಾಗ್ರಹ ಹಿನ್ನೆಲೆಯಲ್ಲಿ ಕುಂಬಳೆ ಟೋಲ್ ಪ್ಲಾಝಾ ಬಳಿ ಕುಂಬಳೆ ಎಸ್.ಐ. ಟಿ.ಕೆ. ಮುಕುಂದನ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿದೆ. ಸತ್ಯಾಗ್ರಹ ಆರಂಭಕ್ಕೂ ಮುನ್ನ ಟೋಲ್ ಗೇಟ್ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದಗಳು ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News