KASARGOD | ತೆಕ್ಕಿಲ್ ನಲ್ಲಿ ಭೀಕರ ರಸ್ತೆ ಅಪಘಾತ: ಮಂಗಳೂರು ಮೂಲದ ಇಬ್ಬರು ಮೃತ್ಯು
ಮೂವರಿಗೆ ಗಂಭೀರ ಗಾಯ
ಕಾಸರಗೋಡು: ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟೀಯ ಹೆದ್ದಾರಿಯ ಚಟ್ಟಂಚಾಲ್ ತೆಕ್ಕಿಲ್ ಎಂಬಲ್ಲಿ ನಡೆದಿದೆ.
ಮೃತರನ್ನು ದ.ಕ. ಜಿಲ್ಲೆಯ ಸಜಿಪ ಬೈಲಗುತ್ತು ನಿವಾಸಿ ದಿ.ಎಸ್.ಬಿ.ಮುಹಮ್ಮದ್ ಎಂಬವರ ಪುತ್ರ ಆಸಿಫ್ ಮುಹಮ್ಮದ್(41) ಮತ್ತು ನಾಟೆಕಲ್ ನಿವಾಸಿ ಅಬ್ಬಾಸ್ ಹಾಜಿ ಎಂಬವರ ಪುತ್ರ ಮುಹಮ್ಮದ್ ಶಫೀಕ್(23) ಎಂದು ಗುರುತಿಸಲಾಗಿದೆ.
ವ್ಯವಹಾರಕ್ಕೆ ಸಂಬಂಧಿಸಿ ಕಾರಿನಲ್ಲಿ ವಯನಾಡಿಗೆತೆರಳಿದ್ದ ಈ ಐವರು ಗೆಳೆಯರು, ಸೋಮವಾರ ರಾತ್ರಿ ಊರಿಗೆ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಇವರು ಪ್ರಯಾಣಿಸುತ್ತಿದ್ದ ಬಿಎಂಡಬ್ಲ್ಯು ಕಾರು ಚಟ್ಟಂಚಾಲ್ ತೆಕ್ಕಿಲ್ ಎಂಬಲ್ಲಿಗೆ ತಲುಪಿದಾಗ ಲಾರಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಆಸಿಫ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಶಫೀಕ್ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ.
ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಸಿಲುಕಿದವರನ್ನು ಕಾಸರಗೋಡಿನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಹೊರತೆಗೆದು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿದ್ದರು. ಕಾರಿನಲ್ಲಿದ್ದ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರು ಮಂಜೇಶ್ವರ ಮೂಲದವರು ಎಂದು ತಿಳಿದುಬಂದಿದೆ.
ಆಸಿಫ್ ಮುಹಮ್ಮದ್ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.