×
Ad

ಕೊಡಗಿನಲ್ಲಿ ಅವಧಿಗೂ ಮುನ್ನ ಅತಿಯಾದ ಮಳೆ : ಎನ್‌ಡಿಆರ್‌ಎಫ್ ನಿಯೋಜನೆ : ಮೇ 29, 30ರಂದು ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆ

Update: 2025-05-28 21:58 IST

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಅವಧಿಗೂ ಮುನ್ನ ಮಳೆ ಅತಿಯಾಗಿದ್ದು, ಜನರಲ್ಲಿ ಆತಂಕ ಮೂಡಿದೆ. ಜನರ ಸುರಕ್ಷತೆಯ ದೃಷ್ಟಿಯಿಂದ ರಾಷ್ಟ್ರೀಯ ವಿಪತ್ತ ನಿರ್ವಹಣಾ ಪಡೆಯನ್ನು ಜಿಲ್ಲೆಗೆ ಕರೆಸಲಾಗಿದೆ.

2018, 2019 ಮತ್ತು 2020 ರಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹದ ಅನಾಹುತಗಳ ಕರಾಳ ದಿನಗಳು ಹಸಿರಾಗಿರುವಾಗಲೇ ಪ್ರಸ್ತುತ ವರ್ಷ ಅವಧಿಗೂ ಮುನ್ನ ಮುಂಗಾರು ಆರಂಭಗೊಂಡು ಇಲ್ಲಿಯವರೆಗೆ 25 ಇಂಚಿಗೂ ಅಧಿಕ ಮಳೆಯಾಗಿದೆ. ಗಾಳಿ ಮಳೆಯ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೂ ಅಪಾರ ಹಾನಿ ಉಂಟಾಗಿದೆ. ಈ ಬೆಳವಣಿಗೆಯಿಂದ ಜಿಲ್ಲೆಯಲ್ಲಿ ಆತಂಕದ ಛಾಯೆ ಮೂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆಗಳಿರುವುದರಿಂದ ಜಿಲ್ಲಾಡಳಿತ ಎನ್‌ಡಿಆರ್‌ಎಫ್ ತಂಡವನ್ನು ಅವಧಿಗೂ ಮೊದಲೇ ಜಿಲ್ಲೆಯಲ್ಲಿ ನಿಯೋಜಿಸಿದೆ.

ಎನ್‌ಡಿಆರ್‌ಎಫ್ ವೃತ್ತ ನಿರೀಕ್ಷಕ ಹರಿಶ್ಚಂದ್ರ ಪಾಂಡೆ ನೇತೃತ್ವದ 80 ಯೋಧರ ತಂಡ ಬೆಂಗಳೂರಿನಿಂದ ಮಡಿಕೇರಿಗೆ ಆಗಮಿಸಿದ್ದು, ಜನರ ರಕ್ಷಣೆಗೆ ಸನ್ನದ್ಧವಾಗಿದೆ. ಮಡಿಕೇರಿಯ ಮೈತ್ರಿ ಸಭಾಂಗಣದಲ್ಲಿ ಬೀಡು ಬಿಟ್ಟಿರುವ ಯೋಧರು ಗಾಳಿ, ಮಳೆ, ಪ್ರವಾಹ, ಭೂಕುಸಿತದಂತಹ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಹರಿಶ್ಚಂದ್ರ ಪಾಂಡೆ, ಕೊಡಗಿನಲ್ಲಿ ಅವಧಿಗೂ ಮೊದಲೇ ಮಳೆ ಆರಂಭಗೊಂಡಿರುವುದರಿಂದ ಜೂನ್ ತಿಂಗಳಿಗೆ ಬದಲಾಗಿ ಮೇ ತಿಂಗಳಿನಲ್ಲೇ ಆಗಮಿಸಿದ್ದೇವೆ. ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜನರ ರಕ್ಷಣೆಗೆ ಎನ್‌ಡಿಆರ್‌ಎಫ್ ವಾಹನಗಳು ಮತ್ತು ಪರಿಕರಗಳೊಂದಿಗೆ ಸದಾ ಸಿದ್ಧರಿದ್ದೇವೆ ಎಂದು ತಿಳಿಸಿದರು.

ಈ ಹಿಂದಿನ ವರ್ಷಗಳಲ್ಲಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ ಪ್ರದೇಶಗಳಿಗೆ ಯೋಧರು ಭೇಟಿ ನೀಡಿ ಮುಂಜಾಗೃತಾ ಕ್ರಮಗಳ ಕುರಿತು ಅವಲೋಕಿಸಲಿದ್ದಾರೆ. ಜಿಲ್ಲೆಯಲ್ಲಿ ಮುಂದಿನ ಒಂದು ವಾರಗಳ ಕಾಲ ರೆಡ್ ಅಲರ್ಟ್ ಇರುವುದರಿಂದ ಯಾವುದೇ ರಕ್ಷಣಾ ಕಾರ್ಯಕ್ಕೆ ಸನ್ನದ್ಧರಾಗಿದ್ದೇವೆ ಎಂದರು.

ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಅಗ್ನಿ ಶಾಮಕ ದಳ, ಗೃಹ ರಕ್ಷಕ ದಳ, ಕಂದಾಯ ಇಲಾಖೆ ಮತ್ತು ಗ್ರಾ.ಪಂ ಗಳು ಎನ್‌ಡಿಆರ್‌ಎಫ್ ಕಾರ್ಯಾಚರಣೆಗೆ ಸಹಕಾರ ನೀಡಲಿವೆ.

ಶಾಲೆಗಳಿಗೆ ರಜೆ :

ಈ ನಡುವೆ ಜಿಲ್ಲೆಯಲ್ಲಿ ಇಂದು ಗಾಳಿ ಮಳೆಯ ಪ್ರಮಾಣ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮೇ 29 ಮತ್ತು 30 ರಂದು ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News