×
Ad

ಕೊಡಗಿನಲ್ಲಿ ಕೇರಳದ ವ್ಯಕ್ತಿಯ ಹತ್ಯೆ ಪ್ರಕರಣ : ಐವರು ಆರೋಪಿಗಳ ಬಂಧನ

Update: 2025-05-03 23:30 IST

ಮಡಿಕೇರಿ : ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಗಣ ಬಿ.ಶೆಟ್ಟಿಗೇರಿ ಗ್ರಾಮದ ಕಾಫಿ ತೋಟದ ಮನೆಯೊಂದರಲ್ಲಿ ಇತ್ತೀಚೆಗೆ ನಡೆದ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪ್ರದೀಪ್ ಕೊಯ್ಲಿ ಎಂಬವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದ ಅನಿಲ್ ಎನ್.ಎಸ್.(25), ಸೋಮವಾರಪೇಟೆ ತಾಲೂಕಿನ ಅಬ್ಬೂರುಕಟ್ಟೆಯ ದೀಪಕ್(21), ನೇರುಗಳಲೆಯ ಸ್ವೀಫನ್ ಡಿಸೋಜ(26), ಹಿತ್ತಲಮಕ್ಕಿಯ ಕಾರ್ತಿಕ್ ಎಚ್.ಎಂ.(27) ಹಾಗೂ ಪೊನ್ನಂಪೇಟೆಯ ನಲ್ಲೂರು ಗ್ರಾಮದ ಹರೀಶ್ ಪಿ.ಎಸ್.(29) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರ ಬಳಿಯಿಂದ 13.03 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನ, 2 ಮೊಬೈಲ್, ಮೃತ ವ್ಯಕ್ತಿಯ ಮೊಬೈಲ್ ಮತ್ತು ಮೃತ ವ್ಯಕ್ತಿಗೆ ಸೇರಿದ ಆಸ್ತಿ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಿ.ಶೆಟ್ಟಿಗೇರಿ ಗ್ರಾಮದ ಕಾಫಿ ತೋಟದ ಮನೆಯಲ್ಲಿ ವಾಸವಿದ್ದ ಕಣ್ಣೂರು ಜಿಲ್ಲೆಯ ಪ್ರದೀಪ್ ಕೊಯ್ಲಿಯವರನ್ನು ಎ.23ರಂದು ಹಗ್ಗದಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಕುರಿತು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿ ಅನಿಲ್ ಎನ್.ಎಸ್., ತಾನು ಪ್ರೀತಿಸಿದ ಯುವತಿಯನ್ನು ಮದುವೆಯಾಗುವ ಪ್ರಯತ್ನದಲ್ಲಿದ್ದಾಗ, ಆಕೆಯ ಮನೆಯ ಕಡೆಯವರು, ನಿನ್ನ ಬಳಿ ಯಾವುದೇ ಆಸ್ತಿ ಮತ್ತು ಹಣವಿಲ್ಲವೆಂದು ನಿರಾಕರಿಸಿದ್ದರು. ಇದೇ ಕಾರಣಕ್ಕೆ ಶೀಘ್ರವಾಗಿ ಆಸ್ತಿ ಮತ್ತು ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಅನಿಲ್ ತಿಳಿಸಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಬಂಧಿತ ಆರೋಪಿ ಅನಿಲ್ ತಾನು ಕೆಲಸ ಮಾಡುವ ಜಾಗಗಳಲ್ಲಿ ಇರುವವರನ್ನು ಪರಿಚಯ ಮಾಡಿಕೊಂಡು ಜಮೀನಿನಲ್ಲಿ ನಿಧಿ ಇರುವುದಾಗಿ ನಂಬಿಸಿ ಬೆಂಗಳೂರು, ಹಾಸನ, ಪೊನ್ನಂಪೇಟೆ ಕಡೆಗಳಲ್ಲಿ ಹಣ ಪಡೆದು ಮೋಸ ಮಾಡಿರುವ ಕುರಿತು ಆರೋಪವಿದೆ.

ಒಂಟಿಯಾಗಿ ವಾಸ ಮಾಡುತ್ತಾ ಹೆಚ್ಚಿನ ಆಸ್ತಿ ಹೊಂದಿರುವವರನ್ನು ಗುರುತಿಸಿ ಆಸ್ತಿ ಖರೀದಿ, ಮಾರಾಟ ಮಾಡುವ ನೆಪದಲ್ಲಿ ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ತಿತಿಮತಿಯಲ್ಲಿನ ಒಂಟಿ ಮಹಿಳೆಯೊಬ್ಬರನ್ನು ಅನಿಲ್ ಸಂಪರ್ಕಿಸಿದ್ದ. ಸದರಿ ಮಹಿಳೆಗೆ ಸ್ಥಳೀಯವಾಗಿ ಸಂಬಂಧಿಕರು ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸದರಿ ವ್ಯವಹಾರವನ್ನು ಸ್ಥಗಿತಗೊಳಿಸಿದ್ದ. ಕೋಣನಕಟ್ಟೆ ಎಂಬಲ್ಲಿ 50 ಎಕರೆ ಜಾಗದ ಮಾಲಕರೊಬ್ಬರನ್ನು ಆಸ್ತಿ ಖರೀದಿಸುವ ನೆಪದಲ್ಲಿ ಪರಿಚಯಿಸಿಕೊಂಡು ಮನೆಯಲ್ಲಿ ಮಕ್ಕಳು ಇರುವುದರಿಂದ ವ್ಯವಹಾರವನ್ನು ಸರಿ ಬರುವುದಿಲ್ಲ ಎಂದು ಕೈಬಿಟ್ಟಿರುವ ಕುರಿತು ಎಸ್ಪಿ ರಾಮರಾಜನ್ ಮಾಹಿತಿ ನೀಡಿದರು.

ಮೃತ ಪ್ರದೀಪ್ ಕೊಯ್ಲಿ ಅವಿವಾಹಿತ ಮತ್ತು ಹೆಚ್ಚಿನ ಆಸ್ತಿ ಹೊಂದಿರುವ ಕುರಿತು ಮಾಹಿತಿಯನ್ನು ಖಚಿತ ಪಡಿಸಿಕೊಂಡಿದ್ದ ಅನಿಲ್, ತೋಟ ಖರೀದಿ ವ್ಯವಹಾರದ ಕುರಿತು ಮಧ್ಯವರ್ತಿಗಳ ಮೂಲಕ ಚರ್ಚಿಸಿದ್ದ ಎಂದು ಹೇಳಲಾಗಿದೆ. ಆಸ್ತಿ ಖರೀದಿದಾರರು ವಿದೇಶದಲ್ಲಿರುವುದಾಗಿ ತಿಳಿಸಿ ಅವರ ಪರವಾಗಿ ಮೃತ ಪ್ರದೀಪ್ ಕೊಯ್ಲಿ ಅವರಿಗೆ 1 ಲಕ್ಷ ರೂ.ಯನ್ನು ಮುಂಗಡವಾಗಿ ನೀಡಿದ್ದನೆಂದು ಎಸ್ಪಿ ತಿಳಿಸಿದರು.

ಪ್ರದೀಪ್ ಅವರನ್ನು ಕೊಲೆ ಮಾಡಿದ ನಂತರ ಮನೆಯಲ್ಲಿದ್ದ ಮೃತದೇಹವನ್ನು ಹೂತು ಹಾಕುವ ಕುರಿತು ಉಪಾಯ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ವಿವರಿಸಿದರು.

ಪ್ರದೀಪ್ ಕೊಯ್ಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗಾಗಿ ರಚಿಸಲಾಗಿದ್ದ ಉಪ ವಿಭಾಗ ಮಟ್ಟದ ವಿಶೇಷ ತನಿಖಾ ತಂಡದಲ್ಲಿ ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ಎಸ್., ಗೋಣಿಕೊಪ್ಪಲು ಸಿಪಿಐ ಶಿವರಾಜ್ ಮುದೋಳ್, ವೀರಾಜಪೇಟೆ ಸಿಪಿಐ ಅನೂಪ್ ಮಾದಪ್ಪ ಪಿ., ಕುಟ್ಟ ಸಿಪಿಐ ಶಿವರುದ್ರ ಬಿ.ಎಸ್., ಗೋಣಿಕೊಪ್ಪ ಪಿಎಸ್ಸೈ ಪ್ರದೀಪ್ ಕುಮಾರ್, ವೀರಾಜಪೇಟೆ ಪಿಎಸ್ಸೈ ಪ್ರಮೋದ್ ಕುಮಾರ್, ಪೊನ್ನಂಪೇಟೆ ಪಿಎಸ್ಸೈ ನವೀನ್ ಜಿ., ಶ್ರೀಮಂಗಲ ಪಿಎಸ್ಸೈ ರವೀಂದ್ರ, ಕುಟ್ಟ ಪಿಎಸ್ಸೈ ಮಹದೇವ ಎಚ್.ಕೆ., ವೀರಾಜಪೇಟೆ ಗ್ರಾಮಾಂತರ ಪಿಎಸ್ಸೈ ಲತಾ ಎನ್.ಜೆ. ಹಾಗೂ ಉಪ ವಿಭಾಗ ಮಟ್ಟದ ಅಪರಾಧ ಪತ್ತೆ ದಳದ ಸಿಬ್ಬಂದಿ ಮತ್ತು ಡಿಸಿಆರ್‌ಬಿ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ ಕಾರ್ಯಾಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News