×
Ad

50 ವರ್ಷ ತುಂಬಿದ ಕೋಲಾರ ಪತ್ರಿಕೆ ಅರ್ಧ ಶತಮಾನದ ಭಾರತದ ಚರಿತ್ರೆಗೆ, ವರ್ತಮಾನಕ್ಕೆ ಸಾಕ್ಷಿಯಾಗಿದೆ: ಕೆ.ವಿ.ಪ್ರಭಾಕರ್

ಸುವರ್ಣ ಸಂಭ್ರಮ ವಿಶೇಷ ಸಂಚಿಕೆ ಜನಾರ್ಪಣೆ ಮಾಡಿದ ಕೆವಿಪಿ

Update: 2025-12-22 08:41 IST

ಕೋಲಾರ ಡಿ 21: 50 ವರ್ಷ ತುಂಬಿದ ಕೋಲಾರ ದಿನ ಪತ್ರಿಕೆ ಈ‌ ಅರ್ಧ ಶತಮಾನದ ಭಾರತದ ಚರಿತ್ರೆಗೆ ಮತ್ತು ಈಗಿನ ವರ್ತಮಾನದ ನಡೆಗೂ ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

ಕೋಲಾರ ಪತ್ರಿಕೆ ಹೊರ ತಂದಿರುವ "ಸುವರ್ಣ ಸಂಭ್ರಮ" ವಿಶೇಷ ಸಂಚಿಕೆಯನ್ನು ಜನಾರ್ಪಣೆಗೊಳಿಸಿ, ಪತ್ರಿಕೆಯ ಜನಪರವಾದ ಹೆಜ್ಜೆ ಗುರುತುಗಳನ್ನು ಉಲ್ಲೇಖಿಸಿ ಮಾತನಾಡಿದರು.

1975 ಏಪ್ರಿಲ್ 5ಕ್ಕೆ ಕೋಲಾರ ಪತ್ರಿಕೆಯ ಜನನ ಆಗತ್ತೆ. 1975ರ ಜೂನ್ 25ಕ್ಕೆ ಇಂದಿರಾಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡುತ್ತಾರೆ ರೆ. ಕೂಸು ಕಣ್ಣು ಬಿಟ್ಟು 2 ತಿಂಗಳಿಗೇ ತುರ್ತು ಪರಿಸ್ಥಿತಿಗೆ ತುತ್ತಾಗತ್ತೆ. ತುರ್ತು ಪರಿಸ್ಥಿತಿಯನ್ನು ಜೀರ್ಣಿಸಿಕೊಂಡು ಕೋಲಾರ ಪತ್ರಿಕೆ ಮುನ್ನಡೆಯತ್ತೆ. ಪತ್ರಿಕೆಗೆ ಹತ್ತು ವರ್ಷ ತುಂಬುವ ಮೊದಲೇ ಇಂದಿರಾಗಾಂಧಿಯವರ ಹತ್ಯೆ ಆಗತ್ತೆ. 1984 ಅಕ್ಟೋಬರ್ 31 ರಂದು ಹತ್ಯೆ ಆಗತ್ತೆ. ಅದೇ ದಿನ‌ ಕೋಲಾರ ಪತ್ರಿಕೆ ಇಂದಿರಾಗಾಂಧಿ ಅವರ ಬಗ್ಗೆ ವಿಶೇಷ ಸಂಚಿಕೆ ಹೊರತರತ್ತೆ. ಸಂಚಿಕೆ ಕೈಯಲ್ಲಿ ಹಿಡಿದ ಓದುಗರೆಲ್ಲರ ಕಣ್ಣುಗಳು ಒದ್ದೆ ಆಗತ್ತೆ ಎಂದು ಪತ್ರಿಕೆಯ ಮೊದಲ ದಶಕದ ನಡೆಯನ್ನು‌ ಸ್ಮರಿಸಿದರು.

ಅವಿಭಜಿತ ಕೋಲಾರ ಜಿಲ್ಲೆಯ ಚರಿತ್ರೆ ಮಾತ್ರವಲ್ಲ ರಾಜ್ಯದ, ದೇಶದ 50 ವರ್ಷಗಳ ನಡೆಗೆ ಕನ್ನಡಿ ಹಿಡಿದ ಪತ್ರಿಕೆ ಶತಮಾನ ಪೂರೈಸಲಿ ಎಂದು ಆಶಿಸುತ್ತೇನೆ. ಈ ಪತ್ರಿಕೆಯನ್ನು ಹಂಚುವ ಹುಡುಗನಾಗಿದ್ದ ನಾನು ಇಂದು ಇದೇ ಪತ್ರಿಕೆಯ "ಸುವರ್ಣ ಸಂಭ್ರಮ" ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸುವ ಧನ್ಯತೆಗೆ ಪಾತ್ರನಾಗಿರುವ ಈ‌ ಕ್ಷಣಕ್ಕೆ ನಾನು ಸದಾ ಋಣಿಯಾಗಿರುತ್ತೇನೆ ಎಂದರು.‌

ಕೋಲಾರ ಪತ್ರಿಕೆ ಅಕ್ಷರ ಲೋಕದ ಅಜ್ಜ. ಈ ಅಜ್ಜನ ಆಶೀರ್ವಾದದಿಂದ ಪತ್ರಕರ್ತನಾಗಿ ರೂಪುಗೊಂಡವನು ನಾನು. ನನ್ನ ಹಾಗೆ ಅದೆಷ್ಟು ಪತ್ರಕರ್ತರು ರೂಪುಗೊಂಡರೋ ಲೆಕ್ಕಕ್ಕಿಲ್ಲ. ವಿ.ಆರ್.ಸುದರ್ಶನ್ ಅವರು ಈ ವಿಶೇಷ ಸಂಚಿಕೆಗೆ ಬರೆದಿರುವ ತಮ್ಮ ಲೇಖನದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. "ಕೋಲಾರ ಪತ್ರಿಕೆ ಒಂದು ಟ್ರೈನಿಂಗ್ ಸೆಂಟರ್ ಆಗಿತ್ತು, ಹೊಸ ಹೊಸ ಪತ್ರಕರ್ತರನ್ನು ರೂಪಿಸುವ ಕಾರ್ಖಾನೆ ಎಂದು ಬರೆದಿದ್ದಾರೆ. ಇದು ಅಕ್ಷರಶಃ ಸತ್ಯ. ಕೋಲಾರ ಪತ್ರಿಕೆಯ ಗರಡಿ ಮನೆಯಲ್ಲಿ ಅಕ್ಷರ ಸಾಕ್ಷಾತ್ಕಾರ ಪಡೆದವರು ಎಲ್ಲಾ ರಾಜ್ಯ ಮಟ್ಟದ ಪತ್ರಿಕೆಗಳಲ್ಲೂ ವೃತ್ತಿಪರತೆ ಪಾಲಿಸುತ್ತಿದ್ದಾರೆ ಎಂದರು.

"ಹಿಂದಣ ಹೆಜ್ಜೆಯನರಿಯದವನು ಮುಂದಣ ಹೆಜ್ಜೆ ಇಡಲಾರನು" ಎನ್ನುವ ಮಾತೊಂದಿದೆ. ಈ ಮಾತಿನಂತೆ ಹೇಳಬಹುದಾದರೆ ಅವಿಭಜಿತ ಕೋಲಾರ ಜಿಲ್ಲೆಯ ಅರ್ಧ ಶತಮಾನದ ನಡೆಯನ್ನು ಇವತ್ತಿನ ವರ್ತಮಾನದ ಓದುಗರಿಗೆ ದಾಟಿಸುವ ಅದ್ಭುತ ಪ್ರಯತ್ನವನ್ನು ಸುವರ್ಣ ಸಂಚಿಕೆ ಮೂಲಕ ಮಾಡಿದ್ದಾರೆ.

ಉದಾಹರಣೆಗೆ ಹೇಳೋದಾದರೆ, "ಕೋಲಾರ ಜಿಲ್ಲೆಯ ಪ್ರಾಚೀನ ಶಿಲಾ ಸಮಾಧಿಗಳ ಬಗ್ಗೆ ಪಿ.ಚಂದ್ರಪ್ರಕಾಶ್ ಅವರು ಬರೆದಿರುವ ಲೇಖನ‌ ನನಗೆ ಅತ್ಯಂತ ಬೆರಗು‌ ಹುಟ್ಟಿಸಿತು. ಇವರು ತಮ್ಮ ಲೇಖನದಲ್ಲಿ, "ಕಲ್ಲು ಗಣಿಗಾರಿಕೆಯಿಂದಾಗಿ ಟೇಕಲ್-ತಲಗುಂದ-ಧನಮಟ್ನಳ್ಳಿ-ಕೆಂದಟ್ಟಿ-ಗರುಡನ‌ ಹಳ್ಳಿ ಗಳಲ್ಲಿ ಇದ್ದ ಶಿಲಾಸಮಾಧಿಗಳು ನಾಶ ಆಗಿರುವುದನ್ನು ಉಲ್ಲೇಖಿಸಿದ್ದಾರೆ. ಇವೆಲ್ಲಾ ನಾನು ಆಡಿ ಬೆಳೆದ ಜಾಗಗಳು. ಇಲ್ಲಿ ಶಿಲಾಸಮಾಧಿಗಳು ಇದ್ದವು ಎನ್ನುವುದೇ ನನಗೆ ಗೊತ್ತಿರಲಿಲ್ಲ ಎಂದರು.

ವಿಜ್ಞಾನದ ಬಗ್ಗೆ ಮೊದಲಿಗೆ ಅಂಕಣ ಆರಂಭಿಸಿದ ಶ್ರೇಯಸ್ಸು ಕೋಲಾರ ಪತ್ರಿಕೆಗೆ ಸಲ್ಲುತ್ತದೆ. ಇದರ ಜೊತೆಗೆ ಕಾನೂನು ತಿಳುವಳಿಕೆ ಸೇರಿ ನಿತ್ಯ ಬದುಕನ್ನು ಆವರಿಸಿರುವ ಎಲ್ಲಾ ವಲಯಗಳ ಬಗ್ಗೆಯೂ ಅರ್ಥಪೂರ್ಣ ಅಂಕಣಗಳನ್ನು ಬರೆಸುವ ಮೂಲಕ ಪ್ರಹ್ಲಾದ ರಾಯರು ಅವಿಭಜಿತ ಕೋಲಾರ ಜಿಲ್ಲೆಯ ವಿವೇಕವನ್ನು ನಿರಂತರ ತಿದ್ದುತ್ತಾ, ವಿಸ್ತರಿಸುತ್ತಾ ಬಂದಿದ್ದರು. ಈಗ ಆ ಸಾರ್ಥಕ ಕೆಲಸವನ್ನು ಸುಹಾಸ್ ಪ್ರಹ್ಲಾದ್ ರಾವ್ ಅವರು ಮುಂದುವರೆಸಿದ್ದಾರೆ ಎಂದರು.

ಈ ವಿಶೇಷ ಸಂಚಿಕೆಯಲ್ಲೂ ಕೋಲಾರದ ಪ್ರಾಗೈತಿಹಾಸ, ಶಾಸನಗಳು, ಮಣ್ಣಿನ ಗುಣ, ಪ್ರಾಕೃತಿಕ ಸೊಬಗು, ರಾಜಕಾರಣ, ಸಂಸ್ಕೃತಿ ಮತ್ತು ಆರ್ಥಿಕತೆಯ ಪ್ರಗತಿಯನ್ನು ದಾಖಲಿಸಲಾಗಿದೆ. ಕೇವಲ ಜಾಹಿರಾತಿಗಾಗಿ ವಿಶೇಷ ಸಂಚಿಕೆಯನ್ನು ಮಾಡುವವರೂ ಇದ್ದಾರೆ. ಆದರೆ ಕೋಲಾರ ಪತ್ರಿಕೆ ಸಂಗ್ರಹಯೋಗ್ಯವಾದ ವಿಶೇಷ ಸಂಚಿಕೆಯನ್ನು ರೂಪಿಸಿದೆ ಎಂದರು.

ಈ ಸುವರ್ಣ ಸಂಭ್ರಮ ಮಾತ್ರವಲ್ಲ, 1976 ರಲ್ಲೇ ಮೊದಲ ವಾರ್ಷಿಕೋತ್ಸವ ಸಂದರ್ಭದಲ್ಲಿ ಹೊರತಂದಿದ್ದ " ಶೃಂಗ" ವಿಶೇಷ ಸಂಚಿಕೆಯಿಂದ ಹಿಡಿದು ಇವತ್ತಿನ ಸುವರ್ಣ ಸಂಭ್ರಮದವರೆಗೂ ಪ್ರತೀ ವಿಶೇಷ ಸಂಚಿಕೆಗಳೂ ಸಂಗ್ರಹಯೋಗ್ಯವಾಗಿವೆ. ತಮಿಳು-ತೆಲುಗು ಮಾತಾಡುವವರೇ ಹೆಚ್ಚಾಗಿದ್ದ ಜಿಲ್ಲೆಯಲ್ಲಿ ಕನ್ನಡ ನೆಲ-ಜಲ-ಭಾಷೆ-ಸಂಸ್ಕೃತಿಯನ್ನು ಕಟ್ಟುವ ಕನಸು ಮತ್ತು ಕಾಳಜಿಯ ಜೊತೆಗೆ ಹುಟ್ಟಿದ ಕೋಲಾರ ಪತ್ರಿಕೆ ತನ್ನ ಕನಸನ್ನು ನನಸು ಮಾಡಿಕೊಂಡಿದೆ. ಕಾಳಜಿಯನ್ನು ಸಾಕಾರಗೊಳಿಸಿಕೊಂಡಿದೆ ಎಂದರು.

Delete Edit

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News