Kolar | ಡಿವೈಡರ್‌ಗೆ ಢಿಕ್ಕಿ ಹೊಡೆದು ಸೇತುವೆಯಿಂದ ಕೆಳಗೆ ಬಿದ್ದ ಕಾರು; ನಾಲ್ವರು ಮೃತ್ಯು
ಕೋಲಾರ : ವೇಗವಾಗಿ ಚಲಿಸುತ್ತಿದ್ದ ಕಾರೊಂದು ಡಿವೈಡರ್‌ಗೆ ಢಿಕ್ಕಿ ಹೊಡೆದು ನಂತರ ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ತಮಿಳುನಾಡು ಮೂಲದ ನಾಲ್ವರು ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಅಬ್ಬೇನಹಳ್ಳಿ ಗ್ರಾಮದ ಬಳಿಯ ಬೆಂಗಳೂರು -ಚೆನ್ನೈ ಕಾರಿಡಾರ್ ರಸ್ತೆಯ ಸೇತುವೆ ಬಳಿ ರವಿವಾರ ತಡರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಮೃತಪಟ್ಟವರನ್ನು ತಮಿಳುನಾಡು ಮೂಲದ ಗೋಪಿ (38), ಗೌತಮ್ ರಮೇಶ್ (28), ಹರಿಹರನ್ (27) ಹಾಗೂ ಜಯಶಂಕರ್ (30) ಎಂದು ಗುರುತಿಸಲಾಗಿದೆ.
ತಮಿಳುನಾಡಿನ ಚೆನ್ನೈ ಮೂಲದ ಯುವಕರು ಕೆಲಸ ಅರಸಿ ಬೆಂಗಳೂರಿಗೆ ಬಂದು ಜೀವನ ಕಟ್ಟಿಕೊಂಡಿದ್ದರು. ವೀಕೆಂಡ್ ಇದೆ ಊರಿಗೆ ಹೋಗಿ ಬರೋಣ ಅಂತ ತೀರ್ಮಾನಿಸಿ ಶನಿವಾರ ಚೆನ್ನೈನ ತಮ್ಮ ಗ್ರಾಮಗಳಿಗೆ ತೆರಳಿದ್ದಾರೆ. ರವಿವಾರ ರಾತ್ರಿ ಹರಿಹರನ್ ತನ್ನ ಕಾರಿನಲ್ಲಿ ಬೆಂಗಳೂರು - ಚೆನ್ನೈ ಕಾರಿಡಾರ್ ರಸ್ತೆಯ ಮಾರ್ಗದಲ್ಲಿ ಬೆಂಗಳೂರಿಗೆ ವಾಪಸು ಬರುತ್ತಿರುವಾಗ ಕ್ಷಣಾರ್ಧದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ಮಾಡಿ ಸಂಬಂಧಿಕರಿಗೆ ಮೃತದೇಹಗಳ ಹಸ್ತಾಂತರ ಮಾಡಲಾಯಿತು. ಮಾಲೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.