×
Ad

2,000 ಕೋಟಿ ರೂ. ವೆಚ್ಚದಲ್ಲಿ ರೈಲ್ವೇ ವಿದ್ಯುದೀಕರಣ : ವಿ.ಸೋಮಣ್ಣ

ಕೋಲಾರ ಜಿಲ್ಲೆಯ ಟೇಕಲ್ ರೈಲ್ವೇ ನಿಲ್ದಾಣದಲ್ಲಿ ಮೇಲ್ಸೇತುವೆ ಲೋಕಾರ್ಪಣೆ

Update: 2025-12-21 19:56 IST

ಕೋಲಾರ : ರಾಜ್ಯದ ಎಲ್ಲಾ ಕಡೆ ಸುಮಾರು 2,000 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲ್ವೇ ವಿದ್ಯುದೀಕರಣ ಆಧುನೀಕರಿಸಲಾಗುತ್ತಿದೆ ಎಂದು ಕೇಂದ್ರ ಜಲಶಕ್ತಿ ಮತ್ತು ರಾಜ್ಯ ರೈಲ್ವೇ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.

ಕೋಲಾರ ಜಿಲ್ಲೆಯ ಟೇಕಲ್ ರೈಲ್ವೇ ನಿಲ್ದಾಣದಲ್ಲಿ ಲೆವೆಲ್ ಕ್ರಾಸಿಂಗ್ ಬದಲಿಗೆ ನಿರ್ಮಿಸಲಾದ ರೈಲ್ವೆ ಮೇಲ್ಸೇತುವೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಚಿವರು, ರಾಜ್ಯಕ್ಕೆ ಕೋಲಾರ, ಬೆಂಗಳೂರು, ರಾಮನಗರ ಹಾಗೂ ತುಮಕೂರು ಹೃದಯಭಾಗ ಇದ್ದಹಾಗೆ. ಈ ಭಾಗದ ಅಭಿವೃದ್ದಿ ಮಾಡುವುದು ನಮ್ಮ ಚಿಂತನೆಯಾಗಿದೆ ಎಂದರು.

ರೈಲ್ವೇ ಡಿಆರ್‌ಎಂಒ ಅವರೊಂದಿಗೆ ಚರ್ಚಿಸಿ ಅಗತ್ಯವಿರುವ ಕಡೆ ಮೆಲ್ಸೇತುವೆ ಮತ್ತು ಕೆಳ ಸೇತುವೆಗಳನ್ನು ಆದ್ಯತೆ ಮೇರೆಗೆ ಕೆಲಸ ಮಾಡಲಾಗುತ್ತಿದೆ. 25 ರಿಂದ 30 ವರ್ಷದ ಹಳೆಯದಾದ ಅನೇಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಗಳನ್ನು 2026- 27ರ ಒಳಗೆ ಪೂರ್ಣಗೊಳಿಸಲಾಗುವುದು ಎಂದರು.

ಕೋಲಾರದಿಂದ ಬೆಂಗಳೂರಿಗೆ ನೇರ ರೈಲ್ವೇ ಮಾಡಲು ಸ್ಥಳ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಟ್ಟಾರೆ ರೈಲ್ವೇ ಅಭಿವೃದ್ಧಿಗೆ ಕೇಂದ್ರ ಸರಕಾರ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.

ಟೇಕಲ್ ರೈಲು ನಿಲ್ದಾಣದ ಹತ್ತಿರದ ಲೆವೆಲ್ ಕ್ರಾಸಿಂಗ್ ಗೇಟ್ ಹೆಚ್ಚು ವಾಹನ ದಟ್ಟಣೆಯಿಂದ ಕೂಡಿದ ಲೆವೆಲ್ ಕ್ರಾಸಿಂಗ್ ಗೇಟ್ ಆಗಿದ್ದು, ಮಾರ್ಚ್ 2024ರ ಗಣತಿಯಂತೆ ಇದರ ರೈಲು ವಾಹನ ಏಕಮಾನವು 10,03,704 ಆಗಿತ್ತು. ಹೆಚ್ಚುತ್ತಿರುವ ವಾಹನ ದಟ್ಟಣೆಯ ಸಮಸ್ಯೆಯನ್ನು ಪರಿಹರಿಸಲು ಮತ್ತು ಸಂಚಾರದ ಸುರಕ್ಷತೆಯನ್ನು ಹೆಚ್ಚಿಸಲು ಇಲ್ಲಿ ಲೆವೆಲ್ ಕ್ರಾಸಿಂಗ್ ಗೇಟ್ ಗೆ ಬದಲಾಗಿ ರಸ್ತೆ ಮೇಲ್ಸೇತುವೆ ನಿರ್ಮಿಸಲಾಗಿದೆ ಎಂದರು.

ಈ ರಸ್ತೆ ಮೇಲ್ಸೇತುವೆಯನ್ನು ರೈಲ್ವೆ ಸಚಿವಾಲಯ ಮತ್ತು ರಾಜ್ಯ ಸರಕಾರಗಳ 50:50 ವೆಚ್ಚ ಹಂಚಿಕೆಯ ಆಧಾರದಲ್ಲಿ 23.5 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ರಸ್ತೆ ಮೇಲ್ಸೇತುವೆ ನಿರ್ಮಾಣದಿಂದ ಸುಗಮ ಮತ್ತು ತಡೆರಹಿತ ರಸ್ತೆ ಸಂಚಾರಕ್ಕೆ ಅನುಕೂಲವಾಗುತ್ತದೆ. ರಸ್ತೆ ಮತ್ತು ರೈಲು ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸುತ್ತದೆ ಹಾಗೂ ಈ ಭಾಗದಲ್ಲಿ ಸಾರಿಗೆಯ ದಕ್ಷತೆಯನ್ನು ಸುಧಾರಿಸುತ್ತದೆ ಎಂದರು.

ನಂತರ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ನವೀಕರಿಸಲಾದ ಉರಗಾಂ ರೈಲ್ವೆ ನಿಲ್ದಾಣ ಹಾಗೂ ನವೀಕರಿಸಲಾದ ಕೋರಮಂಡಲ ರೈಲ್ವೆ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಸಂಸದ ಎಂ.ಮಲ್ಲೇಶ್ ಬಾಬು, ಶಾಸಕರಾದ ರೂಪಕಲಾ ಶಶಿಧರ್, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News