ಪೊಲೀಸರು ವಾರ್ಷಿಕ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿ, ನವಚೈತನ್ಯದಿಂದ ಕರ್ತವ್ಯಕ್ಕೆ ಮರಳಿ: ಡಿ.ಸಿ.ಡಾ. ಎಂ.ಆರ್.ರವಿ
ಕೋಲಾರ : ಪೊಲೀಸರು ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ದೃಷ್ಟಿಯಿಂದ ವಾರ್ಷಿಕ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿ, ನವಚೈತನ್ಯದಿಂದ ಕರ್ತವ್ಯಕ್ಕೆ ಮರಳಿ ಬನ್ನಿ ಎಂದು ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಕರೆ ನೀಡಿದರು.
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಕವಾಯತು ಮೈದಾನದಲ್ಲಿ ಕೋಲಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿರುವ 3 ದಿನಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸರು ವೃತ್ತಿಯನ್ನು ಅತ್ಯಂತ ಗಂಭೀರವಾಗಿ ಘನತೆಯಿಂದ ನಿರ್ವಹಿಸಬೇಕಾಗುತ್ತದೆ. ಹಾಗಾಗಿ ಬಹಳ ಒತ್ತಡದಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ, ಒತ್ತಡ ನೀಗಿಸಿಕೊಳ್ಳುವುದು ಅಷ್ಟೇ ಅಗತ್ಯವಿದೆ. ಒತ್ತಡಗಳಿಂದ ಹೊರಬಂದು ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಸಿಕೊಳ್ಳುವ ದೃಷ್ಟಿಯಿಂದ ಇಲಾಖೆಯಿಂದ ವಾರ್ಷಿಕ ಕ್ರೀಡಾಕೂಟ ಆಯೋಜನೆ ಮಾಡಲಾಗುತ್ತದೆ. ಎಲ್ಲರೂ ಕ್ರೀಡಾ ಸ್ಫೂರ್ತಿ ಯಿಂದ ಭಾಗವಹಿಸಬೇಕು, ಸೋಲು ಗೆಲುವು ಪ್ರಶ್ನೆಯಲ್ಲ̤ಅಂತಿಮವಾಗಿ ಕ್ರೀಡಾಕೂಟದ ಕೊನೆಯಲ್ಲಿ ಹೊಸ ಚೈತನ್ಯ ತುಂಬಿಕೊಂಡು ಹೊಸ ಹೊಸ ಸವಾಲುಗಳನ್ನು ಎದುರಿಸುವಂತಹ ಆತ್ಮವಿಶ್ವಾಸವನ್ನು ಪಡೆಯಲು ಈ ಕ್ರೀಡಾಕೂಟ ಸಹಕಾರಿಯಾಗಲಿ ಎಂದು ಆಶಿಸಿದರು.
ಪೊಲೀಸರಲ್ಲೂ ಬಹಳ ಜನ ಸಾಂಸ್ಕೃತಿಕ ಪ್ರತಿಭೆ ಹೊಂದಿರುವವರಿದ್ದಾರೆ, ನಮ್ಮಲ್ಲಿಯೂ ಕಲೆ ಮತ್ತು ಸಾಂಸ್ಕೃತಿಕ ಪ್ರತಿಭೆ ಇದೆ, ಸಮಾಜದ ಇತರೆ ಜನರೊಂದಿಗೆ ಬೆರೆಯುವ ನಮ್ಮ ಭಾವನೆಗಳನ್ನೂ ಗೌರವಿಸಿ ಎಂಬುವ ಸಂದೇಶ ಒಳ್ಳೆಯದು ಎಂದು ಹೇಳಿದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ್ ಮಾತನಾಡಿ, ಪೊಲೀಸರು ದೇಶದ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದಾರೆ, ಆದುದ್ದರಿಂದಲೇ ನಾವೆಲ್ಲರೂ ನೆಮ್ಮದಿಯಿಂದ ಮಲಗುತ್ತೇವೆ ಎಂದು ಹೇಳಿದರು.
ಒತ್ತಡದಲ್ಲಿ ಕೆಲಸ ಮಾಡಿದರೂ ಅರಣ್ಯ ಇಲಾಖೆಗೂ ಪೊಲೀಸರು ಸಹಕಾರ ನೀಡಿದ್ದಾರೆ, ಅದಕ್ಕಾಗಿ ಧನ್ಯವಾದ ಎಂದ ಅವರು, ಪೊಲೀಸರಿಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಬಹಳ ಮುಖ್ಯವಾಗಿದೆ, ಕ್ರೀಡಾಕೂಟದಲ್ಲಿ ಸೋಲು ಗೆಲುವುಗಿಂತ ಕ್ರೀಡಾ ಸ್ಪೂರ್ತಿ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಈ ಸಂದರ್ಭದಲ್ಲಿ ಅಪರ ಪೊಲೀಸ್ ಅಧೀಕ್ಷಕರಾದ ರವಿಶಂಕರ್, ಜಗದೀಶ್, ಪೊಲೀಸ್ ಉಪಾಧೀಕ್ಷ ಎಂ.ಹೆಚ್. ನಾಗ್ತೆ, ಗಲ್ ಪೇಟೆ ವೃತ್ತ ನಿರೀಕ್ಷಕ ಎಂ. ಜೆ.ಲೋಕೇಶ್, ಕೋಲಾರ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಕಾಂತರಾಜು ಇದ್ದರು.