ಒಂದೇ ತಿಂಗಳಲ್ಲಿ ಹಲವು ಪ್ರಕರಣಗಳು ಭೇದಿಸಿದ ಕೋಲಾರ ಪೊಲೀಸರು; ಸುಮಾರು 2.25 ಕೋಟಿ ರೂ. ಮೌಲ್ಯದ ಸೊತ್ತು ವಶಕ್ಕೆ
ಎಸ್‌ಪಿ ನಿಖಿಲ್ ಶ್ಲಾಘನೆ; ತನಿಖಾ ತಂಡಕ್ಕೆ ನಗದು ಬಹುಮಾನ ವಿತರಣೆ
ಕೋಲಾರ : ಕೋಲಾರ ಜಿಲ್ಲೆಯ ಪೊಲೀಸರ ತನಿಖಾ ನೈಪುಣ್ಯತೆಯಿಂದ ಒಂದೇ ತಿಂಗಳಲ್ಲಿ 5 ಪ್ರಕರಣಗಳನ್ನು ಭೇದಿಸಿ ಸುಮಾರು 2.25 ಕೋಟಿ ಬೆಲೆ ಬಾಳುವ ಚಿನ್ನ ಬೆಳ್ಳಿ ಸೇರಿದಂತೆ ಹಲವು ವಸ್ತುಗಳನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರು ತಿಳಿಸಿದ್ದಾರೆ.
ನಗರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣಗಳನ್ನು ಬೆನ್ನಟ್ಟಿದ ಪೊಲೀಸ್ ಉಪಾಧೀಕ್ಷರಾದ ಮೊಹಮ್ಮದ್ ಹುಮಾಯೂನ್ ನಾಗ್ತೆ ಮತ್ತು ಇನ್ಸ್ಪೆಕ್ಟರ್ ಕಾಂತರಾಜು ನೇತೃತ್ವದ ತಂಡ ಲಭ್ಯ ತಂತ್ರಜ್ಞಾನಗಳನ್ನು ಬಳಸಿಕೊಂಡು ನಡೆಸಿದ ತನಿಖೆಯಲ್ಲಿ ವಿವಿಧ ದೇವಾಲಯಗಳಲ್ಲಿ ಕಳ್ಳತನ ಮಾಡಿದ ಸುಮಾರು 1,27,000 ರೂಪಾಯಿ ಮೌಲ್ಯದ ಬಂಗಾರದ ತಾಳಿಗಳು, 2,85,000 ರೂ. ಮೌಲ್ಯದ ಆಟೋವನ್ನು ಜಪ್ತಿ ಮಾಡಿ, ಕೆ.ಜಿ.ಎಫ್ ತಾಲ್ಲೂಕಿನ ಪಾರಂಡಹಳ್ಳಿ ನಿವಾಸಿ ನಾಗರಾಜ್ (50 ) ಎಂಬ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಕೋಲಾರ ಹೊರವಲಯದಲ್ಲಿರುವ ಗಾಜಲದಿನ್ನೆ ಬಳಿ ಇರುವ ಯರಗೋಳ್ ಕುಡಿಯುವ ನೀರು ಸರಬರಾಜು ಕೇಂದ್ರದಲ್ಲಿ ಇಂಜಿನಿಯರಿಂಗ್ ಪ್ರಾಜೆಕ್ಟ್ ಇಂಡಿಯಾ ಲಿಮಿಟೆಡ್ (EPIL) ಗೆ ಸೇರಿದ ಯೋಜನೆಗೆ ಬಳಸಬೇಕಾದ ಸುಮಾರು 25 ಲಕ್ಷ ಮೌಲ್ಯದ ಕಬ್ಬಿಣದ ವಾಲ್ವ್ ಗಳನ್ನು ಕಳವು ಮಾಡಿದ್ದ ನಗರದ ಟಮಕ ನಿವಾಸಿ ಶಿವ (37 ), ಕೋಲಾರ ತಾಲ್ಲೂಕಿನ ಶಿಳ್ಳಂಗೆರೆ ಗ್ರಾಮ ನಿವಾಸಿ ಜ್ಞಾನದೇವ (36), ಕೆಜಿಎಫ್ ತಾಲ್ಲೂಕಿನ ಬೇತಮಂಗಲ ನಿವಾಸಿ ವರುಣ್ (22) ಎಂಬ ಮೂವರು ಆರೋಪಿಗಳಿಂದ ವಶಪಡಿಸಿಕೊಂಡು, ಕಳ್ಳತನಕ್ಕೆ ಬಳಸಿದ ಲಾರಿಯನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಡಿ.ಹೇಮಲತಾ ಪಿ.ಎಸ್.ಐ. ಪೊಲೀಸ್ ಸಿಬ್ಬಂದಿ ಸಾದಿಕ್ ಪಾಷ, ರಾಘವೇಂದ್ರ, ಆಂಜಪ್ಪ, ರವಿಕುಮಾರ್, ಸತೀಶ್ ಕುಮಾರ್, ಆರತಿ, ಹಾಗೂ ತಾಂತ್ರಿಕ ವಿಭಾಗದ ಮುರಳಿ ಮತ್ತು ಶ್ರೀನಾಥ್ ಇದ್ದರು ಎಂದು ತಿಳಿಸಿದರು.
ಕೋಲಾರ ನಗರದ ಗಲ್ ಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳನ್ನು ಬೆನ್ನಟ್ಟಿದ ಗಲ್ ಪೇಟೆ ವೃತ್ತ ನಿರೀಕ್ಷಕ ಎಂ.ಜೆ. ಲೋಕೇಶ್ ನೈತೃತ್ವದ ತಂಡ, ಈ ಕಳವು ಪ್ರಕರಣ ಬಯಲು ಗೊಳಿಸಿದೆ. ಸಿಬ್ಬಂದಿಗಳಾದ ವಾಸುದೇವ ಮೂರ್ತಿ, ಸಿಪಿಸಿ ಕೃಷ್ಣಮೂರ್ತಿ ಮತ್ತು ಜೀಪ್ ಡ್ರೈವರ್ ಶ್ರೀನಿವಾಸ್ ಅವರು ಕೋಲಾರ ಹೊರವಲಯದ ಬೇತಮಂಗಲ ಝಿಗ್ ಝಾಗ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ನಂಬರ್ ಪ್ಲೇಟ್ ಇಲ್ಲದ ಫೆಸಿನೊ ದ್ವಿಚಕ್ರ ವಾಹನದಲ್ಲಿ ಬಂದ ಕೋಲಾರ ಆಜಾದ್ ನಗರದ ಜುನೈದ್ ಪಾಷ(23), ಹಾಗೂ ಕೋಲಾರ ಬೀಡಿ ಕಾಲೋನಿ ಕೂಲಿ ಕೆಲಸಗಾರ ಬಾಬಾ ಜಾನ್ ಅಲಿಯಾಸ್ ಕುಬಾ ಬಾಬಾ (24) ಈ ಇಬ್ಬರು ವ್ಯಕ್ತಿಗಳು ಪೊಲೀಸರನ್ನು ನೋಡಿ ಪರಾರಿಯಾಗಲು ಯತ್ನಿಸಿದಾಗ, ಅವರನ್ನು ಬೆನ್ನಟ್ಟಿದ ಪೊಲೀಸರು ಹಿಡಿದು ವಿಚಾರಣೆ ನಡೆಸಿದಾಗ ಸುಮಾರು 20 ಲಕ್ಷ ಮೌಲ್ಯದ 26 ವಾಹನಗಳ ಕಳುವು ಬಯಲಾಗಿದ್ದು, ವಾಹನಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಚಿಕ್ಕ ತಿರುಪತಿಯ ದಿ ಎಂಪೈರಿಯನ್ ವಿಲ್ಲಾ 124, ಹಂತ 01 ರಲ್ಲಿರುವ ಮನೆಯ ಮಾಸ್ಟರ್ ಬೆಡ್ ರೂಮ್ ವಾರ್ಡ್ರೋಬ್ ನ ಗೋದ್ರೇಜ್ ಲಾಕರ್ ನಲ್ಲಿ ಇಟ್ಟಿದ್ದ ಚಿನ್ನ,ಮತ್ತು ವಜ್ರ ಆಭರಣಗಳು ಮತ್ತು ಬೆಳ್ಳಿ ವಸ್ತುಗಳು ಕಳುವು ಪ್ರಕರಣ ಭೇದಿಸಿದ ಮಾಲೂರು ಪೊಲೀಸರು ತಮ್ಮ ಸಮಯ ಪ್ರಜ್ಞೆ ಹಾಗೂ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಮಾಲೂರಿನ ಲಕ್ಕೂರು ಹೋಬಳಿಯ ಇಂಪೀರಿಯರ್ ನಲ್ಲಿ ವೆಲ್ಡಿಂಗ್ ಕೆಲಸ ಮಾಡುವ, ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ಖಾಲಿ ಗುಂಜ್‌ನ ಭೋರತ್ ಪುರ ಪೋಸ್ಟ್ ವ್ಯಾಪ್ತಿಯಲ್ಲಿ ಬರುವ ಅಟ್ಲೋವಿಂದಪುರ ಮೂಲದ ಖಾಯಂ ನಿವಾಸಿ ಉಚಧೀರ್ ಶೇಖ್ (24)ಎಂಬಾತನನ್ನು ಬಂಧಿಸಿ ಸುಮಾರು 40 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ, ಮತ್ತು ವಜ್ರದ ಆಭರಣಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕಾರ್ಯಾಚರಣೆಯನ್ನು ಜಿಲ್ಲಾ ವರಿಷ್ಠಾಧಿಕಾರಿ ನಿಖಿಲ್.ಬಿ. ಅಪರ ಪೊಲೀಸ್ ಅಧೀಕ್ಷಕರಾದ ರವಿಶಂಕರ್ ಹಾಗೂ ಜಗದೀಶ್, ಪೊಲೀಸ್ ಉಪಾಧೀಕ್ಷರಾದ ಎಂ.ಹೆಚ್. ನಾಗ್ತೆ ಮಾರ್ಗದರ್ಶನದಲ್ಲಿ ವಿಶೇಷ ಅಪರಾಧ ಪತ್ತೆ ದಳದ ಅಧಿಕಾರಿ ರಾಮಪ್ಪ ಬಿ ಗುತ್ತೇರ್, ಸಿಬ್ಬಂದಿಯವರಾದ, ಶಾಂತಮ್ಮ , ರಮೇಶ್ ಬಾಬು, ಎಎಸ್ಐ ರೇಣು ಪ್ರಸಾದ್, ಎಎಸ್ಐ ಆನಂದ್, ಎಎಸ್ಐ ವೆಂಕಟೇಶ್, ಪೇದೆಗಳಾದ ಮೂರ್ತಿ, ಚಲಪತಿ, ಕೋದಂಡ ಪಾಣಿ, ಮೋಹನ್ ಕುಮಾರ್, ಮುರಳಿ, ನಾಗರಾಜ್ ಪೂಜಾರ್, ನಾಗಪ್ಪ ತಳವಾರ್, ವೆಂಕಟೇಶ್, ಮುನಿರತ್ನಮ್ಮ, ತಾಂತ್ರಿಕ ವಿಭಾಗದ ಮುರಳಿ ಮತ್ತು ಶ್ರೀನಾಥ್ ಇದ್ದರು ಎಂದು ಹೇಳಿದರು.
ಮತ್ತೊಂದು ಪ್ರಕರಣದಲ್ಲಿ ವೇಮಗಲ್ ಪೊಲೀಸರು ಇನ್ಸ್ಪೆಕ್ಟರ್ ಮಂಜು ಮತ್ತು ಸುನಿತಾ ದೇವಿ ಎಎಸ್ಐ ನಾರಾಯಣಸ್ವಾಮಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ವೇಮಗಲ್ ಠಾಣೆ ಸರಹದ್ದಿನ ಮಲ್ಲಸಂದ್ರ ಗ್ರಾಮದ ಬಚ್ಚಣ್ಣ ಬಿನ್ ದೊಡ್ಡ ನಾರಾಯಣಪ್ಪ ನವರ ಜಮೀನಿನಲ್ಲಿ ಬೆಳೆದಿದ್ದ ಸುಮಾರು 50ಸಾವಿರ ಬೆಲೆ ಬಾಳುವ ಶ್ರೀಗಂಧದ ಮರಗಳನ್ನು ಕಟಾವು ಮಾಡಿ ಕಳ್ಳತನ ಮಾಡಿದ್ದ ನೆರೆಯ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ತಾಲ್ಲೂಕಿನ ವಿ.ಕೋಟ ಮಂಡಲಂ ಕೋಡಿಬಂಡೆ ಗ್ರಾಮದ ಅರುಣ್ (25), ಅದೇ ಕೋಡಿಬಂಡೆ ಗ್ರಾಮದ ವಿ.ಸುಬ್ರಮಣಿ (28) ಎಂಬ ಆರೋಪಿಗಳನ್ನು ಪತ್ತೆ ಹಚ್ಚಿ ಅವರಿಂದ 40 ಕೆ.ಜಿ. ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಮಾಲೂರಿನ ಚಿನ್ನಾಭರಣ ಕಳುವು, ಕೋಲಾರ ಗ್ರಾಮಾಂತರ ಠಾಣೆಯ ಬಂಗಾರದ ತಾಳಿಗಳು ಹಾಗೂ ಕಬ್ಬಿಣದ ವಾಲ್ವ್ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿದ ಮಾಲೂರು ಮತ್ತು ಕೋಲಾರ ಗ್ರಾಮಾಂತರ ಪೊಲೀಸ್ ತನಿಖಾ ತಂಡಗಳಿಗೆ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ರವರು ನಗದು ಬಹುಮಾನ ವಿತರಣೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಉಪ ಅಧೀಕ್ಷಕರಾದ ಎಂ.ಹೆಚ್.ನಾಗ್ತೆ, ಜಗದೀಶ್, ಹಾಗೂ ತನಿಖಾ ತಂಡಗಳ ಪೊಲೀಸ್ ಅಧಿಕಾರಿಗಳು ಇದ್ದರು.
ಡಿ.1 ರಿಂದ ಹೆಲ್ಮೆಟ್ ಕಡ್ಡಾಯ:
ಜೀವ ರಕ್ಷಣೆಯ ಹಿತದೃಷ್ಟಿಯಿಂದ ಕೋಲಾರ ಪೊಲೀಸ್ ಜಿಲ್ಲೆಯಾದ್ಯಂತ ಡಿ.1 ರಿಂದ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ತಿಳಿಸಿದರು.
ಕಳೆದ ವರ್ಷ ಹೆಲ್ಮೆಟ್ ಧರಿಸದೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 284 ಇತ್ತು. ಪ್ರಸಕ್ತ ಸಾಲಿನಲ್ಲಿ ಈಗಾಗಲೇ 238 ದಾಟಿದೆ, ಅಪಘಾತದಲ್ಲಿ ಸಾಯುವ ಸಂಖ್ಯೆಯನ್ನು ಇಳಿಮುಖಗೊಳಿಸುವ ಮೂಲಕ ಜನರ ಅಮೂಲ್ಯವಾದ ಜೀವ ರಕ್ಷಣೆಯನ್ನು ಮಾಡಬೇಕಿದೆ ಎಂದರು.
ಮನೆಯಲ್ಲಿರುವ ತಮ್ಮ ಮಡದಿ ಮಕ್ಕಳಿಗಾಗಿ, ತಂದೆ ತಾಯಂದಿರಿಗಾಗಿ ಪ್ರತಿಯೊಬ್ಬರೂ ದ್ವಿಚಕ್ರ ವಾಹನ ಸವಾರಿ ವೇಳೆ ಹೆಲ್ಮೆಟ್ ಧರಿಸಬೇಕು. ಇದಕ್ಕೆ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ವಕೀಲರು, ವೈದ್ಯರು, ಪತ್ರಕರ್ತರು ಮತ್ತು ಸಾರ್ವಜನಿಕರು ಸಹಕರಿಸಬೇಕು. ಹೆಲ್ಮೆಟ್ ಕಡ್ಡಾಯ ನಿಯಮಕ್ಕೆ ಸ್ಪಂದಿಸುವ ಮೂಲಕ ಅಮೂಲ್ಯ ಜೀವವನ್ನು ಯಾರೂ ಕಳೆದುಕೊಳ್ಳದಿರಲು ಕೈಜೋಡಿಸಬೇಕು ಎಂದರು ಮನವಿ ಮಾಡಿದರು.