ಕೋಲಾರ, ಚಿಕ್ಕಬಳ್ಳಾಪುರದ ಆರು ಕಡೆಗಳಲ್ಲಿ ಲೋಕಾಯುಕ್ತ ದಾಳಿ
ಕೋಲಾರ, ನ.18 : ಟ್ರಾಕ್ಟರ್ ಖರೀದಿಗೆ ತೆರಿಗೆ ವಿನಾಯಿತಿ ಪಡೆಯಲು ಬೋನೋಫೈಡ್ ಪ್ರಮಾಣ ಪತ್ರ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಟ್ರಾಕ್ಟರ್ ನೊಂದಣಿಯಲ್ಲಿ ಬೋನಾಪೈಡ್ ಸರ್ಟಿಫಿಕೇಟ್ ಅಕ್ರಮ ನಡೆಸಿರುವ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ 5 ಕಡೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಸೇರಿ 6 ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿದ ಅಧಿಕಾರಿಗಳು ಕಡತಗಳ ಪರಿಶೀಲನೆ ಮಾಡುತ್ತಿದ್ದಾರೆ.
ನರಸಾಪುರ ನಿವೃತ್ತ ಉಪ ತಹಶೀಲ್ದಾರ್ ಎಸ್ . ನಾರಾಯಣಸ್ವಾಮಿ, ನಾಡ ಕಚೇರಿ ಕಂಪ್ಯೂಟರ್ ಆಪರೇಟರ್ ಅಂಬುಜಾ, ಆರ್ ಟಿ ಓ ಮಧ್ಯವರ್ತಿ ಮಂಜುನಾಥ್ , ಅಶ್ವಥ್ ನಾರಾಯಣ, ಟ್ರಾಕ್ಟರ್ ಶೋರೂಂ ಸೇಲ್ಸ್ ಮ್ಯಾನ್ ಗೋಕುಲ್, ಆದಿತ್ಯ ಟ್ರಾಕ್ಟರ್ ಶೋ ರೂಂ ಎಂ.ಡಿ. ಆಂಜನೇಯ ರೆಡ್ಡಿ ಇವರ ಮನೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಕೋಲಾರ -ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಯ 6 ಜನ ಲೋಕಾಯುಕ್ತ ಇನ್ಸ್‌ಪೆಕ್ಟರ್ ಗಳು ಶೋಧ ಕಾರ್ಯದಲ್ಲಿ ನಡೆಸಿದ್ದು, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಜಮೀನು ಪತ್ರಗಳ ಮೂಲಕವೂ ಮಧ್ಯವರ್ತಿಗಳು ಬೋನಾಪೈಡ್ ಸರ್ಟಿಫಿಕೇಟ್ ಪಡೆದಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ ಎನ್ನಲಾಗಿದೆ.
ಟ್ರಾಕ್ಟರ್ ಖರೀದಿಗೆ ಟ್ಯಾಕ್ಸ್ ಫ್ರೀ ಹಾಗೂ ರಿಯಾಯಿತಿ ಸಿಗುತ್ತೆ ಅನ್ನೋ ಕಾರಣಕ್ಕೆ ಕಂದಾಯ ಇಲಾಖೆ ಕೊಡುವ ಬೋನಫೈಡ್ ಪ್ರಮಾಣ ಪತ್ರವನ್ನು ಬಳಸಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಸೇರಿ ಅಕ್ರಮ ಎಸಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ.