ವೃದ್ದಾಶ್ರಮಗಳು ಇಲ್ಲದ ಸಮಾಜ ನಮ್ಮ ಆದ್ಯತೆಯಾಗಲಿ : ಕೆ.ವಿ.ಪ್ರಭಾಕರ್
ಕೋಲಾರ : ಓದಿನ ಜೊತೆಗೆ ನೈತಿಕ ಮೌಲ್ಯಗಳೂ ಬೆಳೆಯಲಿ. ವೃದ್ದಾಶ್ರಮಗಳು ಇಲ್ಲದ ಸಮಾಜ ನಮ್ಮ ಆದ್ಯತೆಯಾಗಲಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಕರೆ ನೀಡಿದರು.
ರಾಕ್ ವ್ಯಾಲಿ ಇಂಟರ್ ನ್ಯಾಷನಲ್ ಶಾಲೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಪಠ್ಯದ ಜೊತೆಗೆ ಜೀವನ ಪಾಠ ಕೂಡ ಬಹಳ ಮುಖ್ಯ. ಮೊದಲೆಲ್ಲಾ ಮದುವೆ ಅಂದ್ರೆ ಊರಿಗೆ ಊರೇ ಆ ಸಂಭ್ರಮದಲ್ಲಿ ಭಾಗಿ ಆಗುತ್ತಿದ್ದರು. ಪರಸ್ಪರ ಬಾಂಧವ್ಯ ಬೆಳೆಯುತ್ತಿತ್ತು. ಈಗ ಬಾಂಧವ್ಯ ಬೆಸೆಯುವುದಿರಲಿ, ಓದಿ ಬೆಳೆದ ಮಕ್ಕಳಿಗೆ ತಂದೆ ತಾಯಿಯೇ ಹೊರೆ ಆಗ್ತಿದ್ದಾರೆ. ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದು ಈ ಕಾರಣಕ್ಕೇ ಎಂದು ಬೇಸರ ವ್ಯಕ್ತಪಡಿಸಿದರು.
ಮಕ್ಕಳು ಬೀದಿ ಪಾಲು ಆಗದ ಹಾಗೆ ಪೋಷಕರು ಹೊಟ್ಟೆ ಬಟ್ಟೆ ಕಟ್ಟಿ ಸಾಕ್ತಾರೆ. ಆದರೆ ಬೆಳೆದ ಮಕ್ಕಳು ವಯಸ್ಸಾದ ಪೋಷಕರನ್ನು ಮರೆತು ಬೀದಿಪಾಲು ಮಾಡುತ್ತಿದ್ದಾರೆ. ಒಂದೇ ಮನೆಯಲ್ಲಿದ್ದರೂ ಅಕ್ಕ ಪಕ್ಕದ ಕೋಣೆಗಳಲ್ಲಿ ಬಂದ್ ಆಗುವ ಮಕ್ಕಳು ಊಟ, ತಿಂಡಿ, ಸುಖ, ದುಃಖ ಎಲ್ಲವನ್ನೂ ವಾಟ್ಸಾಪ್ ಮೂಲಕವೇ ಮೆಸ್ಸೇಜ್ ಹಾಕಿ ಮಲಗುತ್ತಾರೆ. ಇರಿಂದ ಬಾಂಧವ್ಯ ಮತ್ತು ಪರಸ್ಪರತೆ ಬೆಳೆಯುವುದಿಲ್ಲ ಎಂದರು.
ಇಂದು ತಂತ್ರಜ್ಞಾನ ವಿಪರೀತ ಬೆಳೆದಿದೆ. ಕೃತಕ ಬುದ್ದಿಮತ್ತೆಯ ಅನಾಹುತಗಳನ್ನು ನಾವು ನೋಡುತ್ತಿದ್ದೇವೆ. ಇದಕ್ಕೆ ಆಸ್ಪದ ಕೊಡದೆ ತಳ ಮಟ್ಟದ ನೈತಿಕ ಶಿಕ್ಷಣ ಆದ್ಯತೆ ಆಗಲಿ ಎಂದು ಹಾರೈಸಿದರು.
ಮಹಿಳಾ ಸೇವಾ ಶೈಕ್ಷಣಿಕ ಟ್ರಸ್ಟ್ ನ ಮುಖ್ಯಸ್ಥರಾದ ರೂಪ ಪಿಳ್ಳಪ್ಪ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ರಾಕ್ ವ್ಯಾಲಿ ಶಾಲೆಯ ಮುಖ್ಯಸ್ಥರಾದ ಪಿಳ್ಳಪ್ಪ, ನಾಲೆಡ್ಜ್ ಅಕಾಡೆಮಿಯ ಡಾ.ಲೋಕೇಶ್ ಪೂಲ, ವಸತಿ ಸಚಿವರ ಮಾಧ್ಯಮ ಸಂಯೋಜಕರಾದ ಲಕ್ಷ್ಮೀನಾರಾಯಣ್ ಅವರು ಮುಖ್ಯ ಅತಿಥಿಗಳಾಗಿದ್ದರು.