ಪೊಲೀಸ್ ಸಿಬ್ಬಂದಿಯ ಹಿತರಕ್ಷಣೆ, ಇಲಾಖೆಯ ಬಲವರ್ಧನೆಗೆ ಸರಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ : ಜಿ.ಪರಮೇಶ್ವರ್
ಕೋಲಾರ : ಪೊಲೀಸ್ ಸಿಬ್ಬಂದಿಯ ಹಿತರಕ್ಷಣೆ ಮತ್ತು ಇಲಾಖೆಯ ಬಲವರ್ಧನೆಗೆ ಸರಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಕೆಜಿಎಫ್‌ನ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ 10ನೇ ಬೆಟಾಲಿಯನ್ ಆವರಣದಲ್ಲಿ ನೂತನ ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಶಾಸಕಿ ಡಾ.ರೂಪಕಲಾ ಶಶಿಧರ್ ಅವರ ಅಭಿವೃದ್ಧಿ ಕಾಳಜಿಯನ್ನು ಶ್ಲಾಘಿಸಿದ ಸಚಿವರು, ರೂಪಕಲಾ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಅತ್ಯಂತ ವ್ಯವಸ್ಥಿತವಾದ ನೀಲನಕ್ಷೆ ಸಿದ್ಧಪಡಿಸಿದ್ದಾರೆ. ಅವರು ಮಾಡುತ್ತಿರುವ ಕೆಲಸ ಇತರರಿಗೆ ಮಾದರಿ, ಎಂದರು.
ಇಲಾಖೆಯಲ್ಲಿ ಖಾಲಿ ಇರುವ 15,000 ಹುದ್ದೆಗಳ ಪೈಕಿ ಈ ವರ್ಷ 10,000 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಸೈಬರ್ ಅಪರಾಧ ತಡೆಯಲು 1.10 ಲಕ್ಷ ಸಿಬ್ಬಂದಿಗೆ ವಿಶೇಷ ತರಬೇತಿ ಹಾಗೂ ‘ಮನೆ ಮನೆಗೆ ಪೊಲೀಸ್’ ಯೋಜನೆಯ ಮೂಲಕ ಜನಸ್ನೇಹಿ ಆಡಳಿತ ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಅರುಣ್ ಚಕ್ರವರ್ತಿ, ಕೇಂದ್ರ ಐಜಿಪಿ ನಗುರಂ, ಸಂದೀಪ್ ಕುಮಾರ್, ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳ, ಕೆಜಿಎಫ್ ತಹಶೀಲ್ದಾರ್ ಭರತ್, ಬಂಗಾರಪೇಟೆ ತಹಶೀಲ್ದಾರ್ ಸುಜಾತಾ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸುಮಾರು 100 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ‘ಇಂಡಿಯನ್ ರಿಸರ್ವ್ ಪೊಲೀಸ್’ ತರಬೇತಿ ಕೇಂದ್ರದ ನಿರ್ಮಾಣಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಮೊದಲ ಹಂತದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ತರಬೇತಿ ಕೇಂದ್ರ ಮತ್ತು ವಸತಿ ಸಂಕೀರ್ಣ ನಿರ್ಮಾಣ ಮಾಡಲಾಗುವುದು. ಸುಮಾರು 1,000 ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಇಲ್ಲಿ ನೆಲೆ ಸಿಗಲಿದೆ. ಜನಸಂಖ್ಯೆ ಹೆಚ್ಚಳದಿಂದ ಸ್ಥಳೀಯ ವ್ಯಾಪಾರ-ವಹಿವಾಟುಗಳಿಗೆ ಉತ್ತೇಜನ ದೊರೆಯಲಿದೆ.
-ಡಾ.ರೂಪಕಲಾ ಶಶಿಧರ್, ಶಾಸಕಿ