KOLARA | ಪ್ರಿಯಕರನಿಂದ ಯುವತಿಯ ಬರ್ಬರ ಹತ್ಯೆ
ಆರೋಪಿಯನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು
Update: 2026-01-15 09:59 IST
ಕೋಲಾರ, ಜ.15: ಪ್ರೀತಿಸುತ್ತಿದ್ದ ಯುವತಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕೋಲಾರ ಹೊರವಲಯದ ಬಂಗಾರಪೇಟೆ ರಸ್ತೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಬಂಗಾರಪೇಟೆ ತಾಲೂಕು ದಾಸರಹೊಸಹಳ್ಳಿ ಗ್ರಾಮ ನಿವಾಸಿ ಸುಜಾತಾ (27) ಕೊಲೆಯಾದವರು. ಯಳಬುರ್ಗಿ ಗ್ರಾಮದ ಚಿರಂಜೀವಿ ಕೊಲೆ ಆರೋಪಿಯಾಗಿದ್ದಾನೆ.
ಇವರಿಬ್ಬರು ಪ್ರೇಮಿಗಳಾಗಿದ್ದು, ಕೆಲ ದಿನಗಳಿಂದ ಇವರ ಮಧ್ಯೆ ವಿರಸ ಉಂಟಾಗಿತ್ತೆನ್ನಲಾಗಿದೆ.
ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಸುಜಾತಾ ಎಂದಿನಂತೆ ಇಂದು ಬೆಳಗ್ಗೆ ಕೆಲಸಕ್ಕೆ ಹೊರಟಿದ್ದ ವೇಳೆ ಬಂಗಾರಪೇಟೆ ರಸ್ತೆಯಲ್ಲಿ ಆರೋಪಿ ಚಿರಂಜೀವಿ ಭೇಟಿಯಾಗಿದ್ದಾನೆ. ಈ ವೇಳೆ ಚಾಕುವಿನಿಂದ ಇರಿದು ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.
ವಿಷಯ ತಿಳಿದು ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಆರೋಪಿ ಚಿರಂಜೀವಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೋಲಾರ ನಗರ ಪೊಲೀಸ್ ಠಾಣಾ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.