ಕನಕಗಿರಿ | ಪ.ಪಂ ಸಾಮಾನ್ಯ ಸಭೆಗೆ ಗೈರು ವಿಚಾರ; ಓರ್ವ ಸದಸ್ಯ, ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನ : ಆರೋಪ
ಕನಕಗಿರಿ: ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಗೈರು ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು, ಓರ್ವ ಸದಸ್ಯನ ಮೇಲೆ ನೂರಾರು ಜನರ ಗುಂಪೊಂದು ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.
ಪ.ಪಂ ಅಧ್ಯಕ್ಷೆ ತನುಶ್ರೀ ಟಿಜೆ ರಾಮಚಂದ್ರ ಬೆಂಬಲಿಗರ ಗುಂಪು ಮೆಡಿಕಲ್ ಸ್ಟೋರ್‌ನಲ್ಲಿ ಇದ್ದ ಪ.ಪಂ ಸದಸ್ಯ ಅನಿಲ ಬಿಜ್ಜಳ್ ಮೇಲೆ ಏಕಾಏಕಿ ಹಲ್ಲೆ ಮಾಡಲು ಮುಂದಾಗಿದ್ದರೆ, ಅಕ್ಕಪಕ್ಕದವರು ತಕ್ಷಣ ಮಧ್ಯಪ್ರವೇಶಿಸಿ ಹಲ್ಲೆಕೋರರನ್ನು ತಡೆದಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗುಂಪನ್ನು ಚದುರಿಸಲು ಪ್ರಯತ್ನಿಸಿದರೂ ಪರಿಸ್ಥಿತಿ ಹತೋಟಿಗೆ ಬರಲಿಲ್ಲ. ಬಳಿಕ ಡಿ.ಆರ್ ವಾಹನ ಮೂಲಕ ಹೆಚ್ಚುವರಿ ಪೊಲೀಸರನ್ನು ಕರೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ತಿಳಿದು ಬಂದಿದೆ.
ಪತ್ರಕರ್ತರ ಮೇಲೂ ಹಲ್ಲೆಗೆ ಯತ್ನ :
ಘಟನಾ ಸ್ಥಳಕ್ಕೆ ತೆರಳಿದ ಕೆಲ ಪತ್ರಕರ್ತರು ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ವೇಳೆ ಅವರ ಮೊಬೈಲ್‌ಗಳನ್ನು ಕಸಿದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಓರ್ವ ಪತ್ರಕರ್ತನನ್ನು ಎಳೆದಾಡಿದಾಗ ಅಲ್ಲಿದ್ದ ಪೊಲೀಸರು ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದು ರಕ್ಷಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇನ್ನೂ ಕೆಲ ವರದಿಗಾರರನ್ನು ಪ.ಪಂ ಸಿಬ್ಬಂದಿಯೊಬ್ಬ ಮಧ್ಯಪ್ರವೇಶಿಸಿ ತಡೆಯುವ ಮೂಲಕ ಅಪಾಯದಿಂದ ತಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.