×
Ad

ಕೊಪ್ಪಳ | ಸಿದ್ಧರಾಮಯ್ಯನವರ ಸರಕಾರ ಅರ್ಥಿಕವಾಗಿ ದಿವಾಳಿಯಾಗಿದೆ : ಹೇಮಲತಾ ನಾಯಕ ಆರೋಪ

Update: 2026-03-02 18:12 IST

ಕೊಪ್ಪಳ: ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೌರಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಅನೇಕ ಇಲಾಖೆಗಳ ನೌಕರರಿಗೆ ತಿಂಗಳ ಸಂಬಳ ನೀಡಲು ಸರ್ಕಾರ ಪರದಾಡುತ್ತಿದೆ. ಸಾರಿಗೆ ಹಾಗೂ ಆರೋಗ್ಯ ಇಲಾಖೆಗೆ ಪಾವತಿಸಬೇಕಾದ ನೂರಾರು ಕೋಟಿ ರೂ. ಬಾಕಿ ಉಳಿದಿದೆ ಎಂದು ಹೇಳಿದರು.

ಸರ್ಕಾರ ತನ್ನ ಎಡವಟ್ಟುಗಳನ್ನು ಮುಚ್ಚಿಕೊಳ್ಳಲು ‘ಮೀಸಲಾತಿಯಲ್ಲಿ ಗೊಂದಲ’ ಸೃಷ್ಟಿಸಿ ವಿದ್ಯಾರ್ಥಿಗಳು ಮತ್ತು ಯುವಜನರ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಸಂಪುಟ ಸಭೆಯಲ್ಲಿ 56,432 ಹುದ್ದೆಗಳ ಭರ್ತಿಗೆ ಮುಂದಿನ 30 ದಿನಗಳಲ್ಲಿ ಪ್ರಕ್ರಿಯೆ ಆರಂಭಿಸುವುದಾಗಿ ಪ್ರಕಟಿಸಿದರೂ, ಶೇ.56ರ ಮೀಸಲಾತಿಯನ್ನು ಹೊರತುಪಡಿಸಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಇದು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಅವರು ಹೇಳಿದರು.

ಎಸ್ಸಿ ಮೀಸಲಾತಿ ವರ್ಗೀಕರಣಕ್ಕಾಗಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ರಚನೆಯಾಗುವಾಗಲೂ ಶೇ.56ರ ಮೀಸಲಾತಿಯೇ ಇತ್ತು. ಈಗ ಅದನ್ನು ಶೇ.50ಕ್ಕೆ ಇಳಿಸುವ ಮೂಲಕ ಪರಿಶಿಷ್ಟ ವರ್ಗದ ನಾಯಕರನ್ನು ಹಾಗೂ ಹೋರಾಟಗಾರರನ್ನು ಕತ್ತಲಲ್ಲಿ ಇಡಲಾಗಿದೆ ಎಂದು ಟೀಕಿಸಿದರು.

2022ರಿಂದ ರಾಜ್ಯದಲ್ಲಿ ಶೇ.17 ಮತ್ತು ಶೇ.7 ಮೀಸಲಾತಿ ಜಾರಿಯಲ್ಲಿದ್ದು, ಸಿಇಟಿ ಹಾಗೂ ನೀಟ್ ಸೇರಿದಂತೆ ಹಲವು ನೇಮಕಾತಿಗಳು ಶೇ.56ರ ಮೀಸಲಾತಿ ಪ್ರಮಾಣದಲ್ಲಿ ನಡೆದಿವೆ. ಕಳೆದ ನಾಲ್ಕು ವರ್ಷಗಳ ಫಲಾನುಭವಿಗಳ ಭವಿಷ್ಯದೊಂದಿಗೆ ಸರ್ಕಾರ ಆಟವಾಡುತ್ತಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ನಾಗರಾಜ್ ಬಿಲ್ಗಾರ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News