ಕನಕಗಿರಿ | ನವಲಿಯಲ್ಲಿ ಭಕ್ತ ಕನಕದಾಸರ ಜಯಂತಿ ಆಚರಣೆ
ಜಾತೀಯತೆ, ಅಸಮಾನತೆ ವಿರುದ್ಧ ಕನಕದಾಸರ ಕೀರ್ತನೆಗಳ ಮೂಲಕ ಹೋರಾಟ: ನಿಂಗಪ್ಪ ನಾಯಕ
ಕನಕಗಿರಿ: ತಾಲ್ಲೂಕಿನ ನವಲಿ ಗ್ರಾಮದ ಬುದ್ಧ ವೃತ್ತದಲ್ಲಿ ಬುದ್ಧ ಬಳಗದ ವತಿಯಿಂದ ಭಕ್ತ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಂದಾಳು ನಿಂಗಪ್ಪ ನಾಯಕ, ಕನಕದಾಸರು ತಮ್ಮ ಮೊನಚಾದ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಜಾತೀಯತೆ, ಅಸಮಾನತೆ ಹಾಗೂ ಮೌಢ್ಯಾಚಾರದಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದರು ಎಂದು ತಿಳಿಸಿದರು.
ಮೋಹನತರಂಗಿಣಿ, ನಳಚರಿತೆ, ಹರಿಭಕ್ತಿಸಾರ ಹಾಗೂ ರಾಮಧಾನ್ಯ ಚರಿತೆಯಂತಹ ಕೃತಿಗಳ ಮೂಲಕ ಸಾಮಾಜಿಕ ಮೌಲ್ಯಗಳನ್ನು ಸಾರಿದ್ದಾರೆ. ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಅವರು ಹೇಳಿದರು. ಕನಕದಾಸ, ಅಂಬೇಡ್ಕರ್, ವಾಲ್ಮೀಕಿ ಹಾಗೂ ಬಸವಣ್ಣನಂತಹ ಮಹಾಪುರುಷರನ್ನು ಒಂದೇ ವರ್ಗ ಅಥವಾ ಜಾತಿಗೆ ಸೀಮಿತಗೊಳಿಸಬಾರದು ಎಂದು ಅಭಿಪ್ರಾಯಪಟ್ಟರು.
ಅಕ್ರಮ-ಸಕ್ರಮ ಸಮಿತಿಯ ಮಾಜಿ ಸದಸ್ಯ ವೀರೇಶ್ ನಾಗವಂಶಿ ಮಾತನಾಡಿ, ಈ ದೇಶದ ಮನುವಾದಿಗಳು ಶೂದ್ರ ವರ್ಗಕ್ಕೆ ಸೇರಿದ ಕನಕದಾಸರ ಕುರಿತು ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಸಂಬಂಧಿಸಿದಂತೆ ಕಿಂಡಿಯ ಮೂಲಕ ದರ್ಶನ ನೀಡಿದರೆಂಬ ಕಟ್ಟುಕತೆಯನ್ನು ಸೃಷ್ಟಿಸಿದ್ದಾರೆ. ಆದ್ದರಿಂದ ಕನಕದಾಸರ ನೈಜ ಜೀವನದ ಕುರಿತು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.
ವೀರೇಶ ಕಂಬಳಿ ಹಾಗೂ ಪ್ರಗತಿಪರ ಚಿಂತಕ ಲಿಂಗರಾಜ ಹೂಗಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಪ್ಯಾಟೆಪ್ಪ ನಾಯಕ, ನಿಂಗಪ್ಪ ದೇವರಗುಡಿ, ಹುಲುಗಪ್ಪ ಭೋವಿ, ದುರುಗಪ್ಪ ಭಜಂತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.