ಕನಕಗಿರಿ | ತೊಗರಿ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತ ಸಂಘಟನೆಗಳಿಂದ ಪ್ರತಿಭಟನೆ
ಕನಕಗಿರಿ : ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಸೋಮವಾರ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ವಿವಿಧ ಬಣಗಳ ವತಿಯಿಂದ ರಸ್ತೆಗೆ ತೊಗರಿಬೇಳೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ನಂತರ ತಹಶೀಲ್ದಾರ್ ವಿಶ್ವಾನಾಥ ಮುರುಡಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘಟನೆಯ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಪಂಪಣ್ಣ ನಾಯಕ ಅವರು, ಕೇಂದ್ರ ಸರ್ಕಾರ ನಿಗದಿ ಮಾಡಿರುವ ಪ್ರತಿ ಕ್ವಿಂಟಲ್‌ಗೆ 8,000 ರೂ. ಬೆಂಬಲ ಬೆಲೆಯಂತೆ ತೊಗರಿ ಖರೀದಿ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯವಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ತೊಗರಿ ಖರೀದಿ ಕೇಂದ್ರ ಆರಂಭಿಸಿರುವುದು ಸ್ವಾಗತಾರ್ಹವಾದರೂ, ಕೇಂದ್ರ ಸರ್ಕಾರ ನಿಗದಿ ಮಾಡಿದ ಬೆಲೆ ಮಾತ್ರ ನೀಡುತ್ತಿರುವುದು ಸರಿಯಲ್ಲ. ರಾಜ್ಯ ಸರ್ಕಾರ ಪ್ರತಿ ಕ್ವಿಂಟಲ್‌ಗೆ ಕನಿಷ್ಠ 8,500 ರೂ. ನೀಡಿ ತೊಗರಿ ಖರೀದಿ ಮಾಡಬೇಕು ಎಂದು ಅವರು ಆಗ್ರಹಿಸಿದರು.
ರೈತ ಶರಣಪ್ಪ ದೊಡ್ಡಮನಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಕಡೆಗಣಿಸುತ್ತಿವೆ. ತುಂಗಭದ್ರಾ ಡ್ಯಾಂನಲ್ಲಿ ಕ್ರಸ್ಟ್ ಗೇಟ್ ಅಳವಡಿಸುವ ವಿಷಯದಲ್ಲಿ ಸರ್ಕಾರ ಮೀನಾಮೇಷ ಮಾಡುತ್ತಿದೆ. ಸರ್ಕಾರ ರೈತರಿಗಾಗಿ ಯಾವ ಗ್ಯಾರಂಟಿಗಳನ್ನು ನೀಡಿದೆ ಎಂದು ಪ್ರಶ್ನಿಸಿದರು.
ತೊಗರಿ ಖರೀದಿಗೆ ಪ್ರತಿ ಕ್ವಿಂಟಲ್‌ಗೆ 4,000 ರೂ. ಪ್ರೋತ್ಸಾಹಧನ ನೀಡಬೇಕು ಎಂದು ಒತ್ತಾಯಿಸಿದರು.
ಇದಲ್ಲದೆ ತಾಲ್ಲೂಕಿನಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿ ಇಲಾಖೆಗಳಿಗೆ ಶಾಶ್ವತ ಕಟ್ಟಡ ನಿರ್ಮಿಸಬೇಕು. ಸರ್ಕಾರಕ್ಕೆ ರೈತರ ಮೇಲೆ ಕರುಣೆ ಇದ್ದರೆ ಸಾಲಮನ್ನಾ ಮಾಡಬೇಕು. ಎರಡನೇ ಬೆಳೆಗೆ ನೀರು ಇಲ್ಲದ ಕಾರಣ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಎರಡನೇ ಬೆಳೆಗೆ ನೀರು ಬಿಡಬೇಕು. ನೀರಿನ ಕೊರತೆಯಿಂದ ರೈತರು ಬೆಂಗಳೂರು ಸೇರಿದಂತೆ ಇತರ ಪ್ರದೇಶಗಳಿಗೆ ಕೂಲಿ ಕೆಲಸಕ್ಕೆ ವಲಸೆ ಹೋಗುತ್ತಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ರೈತರಾದ ಗಣೇಶ ರೆಡ್ಡಿ, ಸುರೇಶ, ವಿರುಪಣ್ಣ ಕಂಬಳ್ಳಿ, ಬಸವರಾಜ, ಸೋಮಣ್ಣ, ಮಂಜುನಾಥ ಗೋಡಿನಾಳ, ಮಾಳಿಂಗರಾಯ, ಹನುಮೇಶ ಹುಗ್ಗಿ, ಯಂಕಪ್ಪ, ಕನಕಪ್ಪ ನಾಯಕ, ಹನುಮಂತ ಸೇರಿದಂತೆ ಇತರರು ಭಾಗವಹಿಸಿದ್ದರು.