ಕೊಪ್ಪಳ | ಕಳಪೆ ಬಿಸಿಯೂಟ ಪೂರೈಕೆ ಆರೋಪ: ಏಜೆನ್ಸಿ, ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಆಗ್ರಹ
ಕೊಪ್ಪಳ: ಬಿಸಿಯೂಟ ಯೋಜನೆಗೆ ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಪೂರೈಸುತ್ತಿರುವ ಏಜೆನ್ಸಿ ಮತ್ತು ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಯುನಿಯನ್ (ಐಎಫ್‌ಟಿಯು ಸೇರ್ಪಡೆ) ಜಿಲ್ಲಾ ಮಂಡಳಿ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಜಿಲ್ಲಾಧಿಕಾರಿ ಸುರೇಶ್ ಬಿ.ಇಟ್ನಾಳ್ ಅವರ ಮೂಲಕ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ, ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಖಾಸಗಿ ಶಾಲೆಗಳಿಗೆ ಪೂರೈಸಲಾಗುತ್ತಿರುವ ಆಹಾರ ಸಾಮಗ್ರಿಗಳು ಅತ್ಯಂತ ಕಳಪೆ ಗುಣಮಟ್ಟದ್ದಾಗಿದ್ದು, ಮಕ್ಕಳ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಿಗೆ ಹಲವಾರು ಬಾರಿ ಈ ಬಗ್ಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗದ ಕಾರಣ, ಕಳಪೆ ಆಹಾರವನ್ನು ಈಗಲೂ ಶಾಲೆಗಳಿಗೆ ವಿತರಿಸಲಾಗುತ್ತಿದೆ ಎಂದು ದೂರಲಾಗಿದೆ.
ಕಳಪೆ ರೇಷನ್ ಬಳಕೆಯಿಂದ ಮಕ್ಕಳಲ್ಲಿ ಅನಾರೋಗ್ಯ ಕಂಡುಬಂದ ಘಟನೆಗಳು ಈ ಹಿಂದೆ ನಡೆದಿದ್ದು, ಮಾಧ್ಯಮಗಳಲ್ಲಿ ವರದಿಯಾಗಿವೆ. ಅಡುಗೆಯಲ್ಲಿ ನುಸಿ, ಬಾಲಹುಳು ಪತ್ತೆಯಾಗುತ್ತಿರುವುದರಿಂದ ಬಿಸಿಯೂಟ ನೌಕರರನ್ನು ಹೊಣೆಗಾರರನ್ನಾಗಿ ಮಾಡಿ ಕೆಲಸದಿಂದ ತೆಗೆದುಹಾಕಲಾಗುತ್ತಿದೆ. ಇದೊಂದು ಅನ್ಯಾಯಕರ ಸ್ಥಿತಿ ಎಂದು ಯುನಿಯನ್ ಮುಖಂಡರು ಹೇಳಿದರು. ನೃಪತುಂಗ ಪ್ರೌಢಶಾಲೆ ಉದಾಹರಣೆ ಎಂದು ಹೇಳಿದ್ದಾರೆ.
ಬಿಸಿಯೂಟ ನೌಕರರಿಗೆ ಯಾವುದೇ ತಪ್ಪಿಲ್ಲದಿದ್ದರೂ ಅವರನ್ನು ಕೆಲಸದಿಂದ ತೆಗೆದುಹಾಕಿರುವ ಈ ಘಟನೆಯನ್ನು ಖಂಡಿಸಿ, ಕಳಪೆ ಆಹಾರ ಸಾಮಗ್ರಿ ಪೂರೈಸಿದ ಏಜೆನ್ಸಿ ಮತ್ತು ಗುತ್ತಿಗೆದಾರರು ಹಾಗೂ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೆಲಸ ಕಳೆದುಕೊಂಡ ನೌಕರರನ್ನು ಪುನರ್‌ನಿಯೋಜನೆಗೊಳಿಸಬೇಕು ಎಂದು ಬಸವರಾಜ್ ಶೀಲವಂತರ್, ಎಸ್.ಎ. ಗಫಾರ್, ಗಾಳೆಪ್ಪ ಮುಂಗೋಲಿ, ಮಖಬೂಲ್ ರಾಯಚೂರು, ಶಿವಪ್ಪ ಹಡಪದ್ ಮುಂತಾದ ಮುಖಂಡರು ಆಗ್ರಹಿಸಿದರು.