×
Ad

ಕುಕನೂರು | ದ್ವೇಷ ಭಾಷಣ ವಿಧೇಯಕ ವಿರೋಧಿಸಿ ಬಿಜೆಪಿ ಪ್ರತಿಭಟನೆ

Update: 2025-12-26 17:55 IST

ಕುಕನೂರು: ದ್ವೇಷ ಭಾಷಣ ವಿಧೇಯಕದ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ಯಲಬುರ್ಗಾ ಮಂಡಲ ಹಾಗೂ ಕುಕನೂರು ತಾಲ್ಲೂಕು ಘಟಕದ ವತಿಯಿಂದ ಶುಕ್ರವಾರ ಪಟ್ಟಣದ ಅಂಬೇಡ್ಕರ್ ಸರ್ಕಲ್‌ನಿಂದ ಶಿರೂರು ವೀರಭದ್ರಪ್ಪ ಸರ್ಕಲ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಶಿರೂರು ವೀರಭದ್ರಪ್ಪ ಸರ್ಕಲ್‌ನಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ವೀರಣ್ಣ ಹುಬ್ಬಳ್ಳಿ ಅವರು, ದ್ವೇಷ ಭಾಷಣ ವಿಧೇಯಕವು ಸರ್ಕಾರದ ಆಡಳಿತ ವೈಫಲ್ಯಗಳನ್ನು ಮರೆಮಾಚಲು ತರಲಾದ ಜನವಿರೋಧಿ ಕಾನೂನು ಎಂದು ಆರೋಪಿಸಿದರು. ಜನರ ಪ್ರಶ್ನಿಸುವ ಹಕ್ಕು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಉದ್ದೇಶದಿಂದಲೇ ಈ ವಿಧೇಯಕ ತರಲಾಗಿದ್ದು, ಬಿಜೆಪಿ ಇದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದರು.

ತಾಲೂಕು ಪಂಚಾಯತ್‌ ಮಾಜಿ ಅಧ್ಯಕ್ಷ ಶಿವಕುಮಾರ್ ನಾಗಲಾಪುರ ಮಠ ಮಾತನಾಡಿ, ದ್ವೇಷ ಭಾಷಣದ ಹೆಸರಿನಲ್ಲಿ ಸರ್ಕಾರ ವಿರೋಧಿ ಧ್ವನಿಗಳನ್ನು ಕುಗ್ಗಿಸಲು ಯತ್ನಿಸಲಾಗುತ್ತಿದೆ ಎಂದು ಹೇಳಿದರು. 

ಬಳಿಕ ತಾಲೂಕು ದಂಡಾಧಿಕಾರಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅನಿಲ್ ಆಚಾರ, ಶಂಭು ಜೋಳದ, ಕರಬಸಯ್ಯ ಬಿನ್ನಾಳ, ಲಕ್ಷಣ ಕಾಳಿ, ವಿನಾಯಕ ಸರಗಣಾಚಾರ, ಮಂಗಳೆಶ್ ವಾಲ್ಮೀಕಿ, ಅಯ್ಯನಗೌಡ ಕೆಂಚಣ್ಣನವರ್, ರಾಜಶೇಖರ್ ದ್ಯಾಂಪುರ, ಬಸವರಾಜ್ ಹಾಲಕೇರಿ, ಚಂದ್ರು ಬಾಗನಾಳ, ಅಂಬರೀಷ್ ಹುಬ್ಬಳ್ಳಿ ಸೇರಿದಂತೆ ಬಿಜೆಪಿ ಯಲಬುರ್ಗಾ ಮಂಡಲದ ಪದಾಧಿಕಾರಿಗಳು, ಕುಕನೂರು ತಾಲ್ಲೂಕು ಘಟಕದ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News