ಕೊಪ್ಪಳ| ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಜೈಲು ಶಿಕ್ಷೆ
ಕೊಪ್ಪಳ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ ಗಂಗಾವತಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು 1.5 ಲಕ್ಷಗಳ ದಂಡ ಹಾಗೂ 20 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಗಂಗಾವತಿಯ ಎಚ್.ಆರ್.ಎಸ್ ಕಾಲೋನಿಯ ನಿವಾಸಿ ಹುಲ್ಲೇಶ ಕೊಜ್ಜ ಎಂಬಾತ ಅಪ್ರಾಪ್ತ ಬಾಲಕಿ ಶಾಲೆಗೆ ಹೋಗುವಾಗ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿ ಚುಡಾಯಿಸುತ್ತಿದ್ದ. 2022ರ ಸೆಪ್ಟೆಂಬರ್ 7ರಂದು ಬಾಲಕಿ ಶಾಲೆಗೆ ಹೋಗುವಾಗ ಆಕೆಯನ್ನು ಹೆದರಿಸಿ ಮೋಟಾರ್ ಸೈಕಲ್‌ನಲ್ಲಿ ಕೂರಿಸಿಕೊಂಡು ಶಾಲೆಗೆ ಬಿಡದೇ ಬಲವಂತವಾಗಿ ಮಲ್ಲಾಪುರ ಸೀಮಾದ ವಾನಭದ್ರೇಶ್ವರ ಗುಡ್ಡಕ್ಕೆ ಕರೆದುಕೊಂಡು ಹೋಗಿ 2 ದಿನಗಳ ಕಾಲ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದನು. ಘಟನೆ ಬಗ್ಗೆ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದನು.
ಈ ಬಗ್ಗೆ ಹುಲ್ಲೇಶ ಕೊಜ್ಜ ವಿರುದ್ಧ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಪೊಲೀಸರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಅವರು ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 1,50,000ರೂ. ದಂಡವನ್ನು ಪಾವತಿಸುವಂತೆ ಆದೇಶಿಸಿದ್ದಾರೆ.