ಕನಕಗಿರಿ | ವಿರಾಪುರ ಗ್ರಾಮದಲ್ಲಿ ಮರ್ಯಾದಾ ಹತ್ಯೆ, ಕೊಲೆಗೆ ಪ್ರಚೋದನೆ ನೀಡಿದ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ
ಕನಕಗಿರಿ : ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಇನಾಂ ವಿರಾಪುರ ಗ್ರಾಮದಲ್ಲಿ ನಡೆದ ಮರ್ಯಾದಾ ಹತ್ಯೆ ಹಾಗೂ ಈ ಕೊಲೆಗೆ ಪ್ರಚೋದನೆ ನೀಡಿದವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪ್ರಗತಿಪರ ಸಂಘಟನೆಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಪಾಮಣ್ಣ ಅರಳಿಗನೂರು ಆಗ್ರಹಿಸಿದರು.
ಪಟ್ಟಣದ ತಹಶೀಲ್ದಾರ್ ವಿಶ್ವಾನಾಥ ಮುರುಡಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಇನಾಂ ವಿರಾಪುರ ಗ್ರಾಮದ ವಿವೇಕಾನಂದ ಮತ್ತು ಮಾನ್ಯ ಎಂಬ ಯುವಕ-ಯುವತಿ ಪರಸ್ಪರ ಪ್ರೀತಿಸಿ, ಮಾನ್ಯಾಳ ಕುಟುಂಬದ ವಿರೋಧದ ನಡುವೆಯೂ ಸುಮಾರು ಎಂಟು ತಿಂಗಳ ಹಿಂದೆ ವಿವಾಹವಾಗಿದ್ದರು. ಡಿ.8ರಂದು ಅವರು ಇನಾಂ ವಿರಾಪುರಕ್ಕೆ ಬಂದಾಗ, ಮಾನ್ಯಾಳ ಕುಟುಂಬದವರಿಗೆ ಊರಿನ ಕೆಲವರಿಂದ ಕುಮ್ಮಕ್ಕು ದೊರಕಿದ್ದು, ಇದರ ಪರಿಣಾಮವಾಗಿ ತಮ್ಮ ಏಳು ತಿಂಗಳ ಗರ್ಭಿಣಿಯಾದ ಮಗಳನ್ನು ಕುಟುಂಬದವರೇ ಹತ್ಯೆ ಮಾಡಿರುವುದು ಅತ್ಯಂತ ಅಮಾನವೀಯ ಕೃತ್ಯವಾಗಿದೆ ಎಂದು ಹೇಳಿದರು.
ಕೊಲೆ ನಡೆಯುವ ವೇಳೆ ಮಾನ್ಯ “ನನ್ನನ್ನು ಕಾಪಾಡಿ” ಎಂದು ಅಂಗಲಾಚಿದರೂ ಯಾರೂ ಸಹಾಯಕ್ಕೆ ಬರದೇ ಇರುವುದು ಮಾನವೀಯತೆಯನ್ನು ತಲೆತಗ್ಗಿಸುವಂತಹ ಘಟನೆ ಎಂದು ಅವರು ಖಂಡಿಸಿದರು.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಜಾತಿ ವೈಷಮ್ಯ ಹೆಚ್ಚಾಗುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆಯಾಗಿದ್ದು, ಜಾತಿ ಭಯೋತ್ಪಾದನೆಯ ರೂಪ ಪಡೆಯುತ್ತಿದೆ ಎಂದು ಹೇಳಿದರು. ಜಾತಿ ವಿನಾಶಕ್ಕೆ ಹಾಗೂ ಜಾತಿ ಆಧಾರಿತ ತಾರತಮ್ಯ ಮತ್ತು ಹಿಂಸೆಗೆ ಅಂತರ್‌ಜಾತಿ ವಿವಾಹಗಳೇ ಪರಿಹಾರವೆಂದು ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು ಸ್ಪಷ್ಟವಾಗಿ ಪ್ರತಿಪಾದಿಸಿದ್ದರು. ಆದರೆ ವಿಜ್ಞಾನ ಯುಗದಲ್ಲೂ ಅಂತರ್‌ಜಾತಿ ವಿವಾಹಗಳನ್ನು ಒಪ್ಪದ ಜಾತೀಯ ಮನೋಭಾವ ಹೆಚ್ಚುತ್ತಿರುವುದು ವಿಪರ್ಯಾಸವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ದಲಿತ ಮುಖಂಡ ಸಣ್ಣ ಹನುಮಂತ ಅವರು, ಇಂತಹ ಮನೋಸ್ಥಿತಿಗಳು ಸಮ ಸಮಾಜ ನಿರ್ಮಾಣದ ಎಲ್ಲಾ ಮಾನವೀಯ ಪ್ರಯತ್ನಗಳನ್ನು ಹತ್ತಿಕ್ಕುತ್ತಿವೆ. ಮರ್ಯಾದೆಯ ಹೆಸರಲ್ಲಿ ತಮ್ಮದೇ ಮಕ್ಕಳನ್ನು ಕಾನೂನಿನ ಭಯವಿಲ್ಲದೆ ಹತ್ಯೆ ಮಾಡುವ ಘಟನೆಗಳು ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಕ್ರೌರ್ಯವನ್ನೇ ಸಾಮಾಜಿಕ ಘನತೆ ಎಂದು ಪ್ರತಿಷ್ಠಾಪಿಸುವ ಅಪಾಯವೂ ಇದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಲಿಂಗಪ್ಪ ಪೂಜಾರ, ಹನುಮಂತಪ್ಪ ಬಸರಿಗಿಡದ, ಶೇಷಪ್ಪ ಪೂಜಾರ, ನೀಲಕಂಠ ಬಡಿಗೇರ, ಸಣ್ಣದುರಗಪ್ಪ, ದುರ್ಗಪ್ಪ ಲಕ್ಕಮಪುರ, ಉಮೇಶ ಮ್ಯಾಗಡೆ, ಸುರೇಶ ಕುರುಗೋಡು, ಹೊನ್ನೂರ ಸಾಬ, ಹನುಮಂತ ರೆಡ್ಡಿ, ವೆಂಕಟೇಶ ಪೂಜಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.