ಕೊಪ್ಪಳ | ಎಸ್‌ಐಒನಿಂದ ʼಕಲಿಕೆಯೇ ಕಲ್ಯಾಣʼ ಅಭಿಯಾನ : ಇಲ್ಯಾಸ್ ನಾಲ್ಬಂದ್
ಕೊಪ್ಪಳ : ಕಲ್ಯಾಣ ಕರ್ನಾಟಕ ಪ್ರದೇಶವು ಗಂಭೀರ ಶೈಕ್ಷಣಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್‌ಐಒ) ಮತ್ತು ಸೆಂಟರ್ ಫಾರ್ ಎಜುಕೇಷನಲ್ ರಿಸರ್ಚ್ & ಅನಾಲಿಸಿಸ್ (CERA) ಸಹಯೋಗದಲ್ಲಿ “ಕಲಿಕೆಯೇ ಕಲ್ಯಾಣ” ಎಂಬ ತಿಂಗಳ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ಇಲ್ಯಾಸ್ ನಾಲ್ಬಂದ್ ಅವರು ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಡಿ.15ರಿಂದ ಫೆ.15ರ, 2026ರವರೆಗೆ ಈ ಅಭಿಯಾನ ನಡೆಯಲಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವಿಷಯವಾರು ತರಬೇತಿ ನೀಡಲು ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ಹಾಗೂ ಬೋಧನೆ ಆಯೋಜಿಸಲಾಗುತ್ತದೆ ಎಂದು ಹೇಳಿದರು.
ಭೌಗೋಳಿಕವಾಗಿ ಪ್ರಮುಖವಾಗಿದ್ದರೂ, ಕಲ್ಯಾಣ ಕರ್ನಾಟಕ ಪ್ರದೇಶವು ಶಿಕ್ಷಣ ಕ್ಷೇತ್ರದಲ್ಲಿ ಇತರ ಪ್ರದೇಶಗಳಿಗಿಂತ ತೀವ್ರವಾಗಿ ಹಿಂದುಳಿದಿದೆ. ಇತ್ತೀಚಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶಗಳು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯಲ್ಲಿ ಆತಂಕಕಾರಿ ಸ್ಥಿತಿಯನ್ನು ತೋರಿಸುತ್ತಿವೆ. ಈ ಹಿನ್ನೆಲೆಯಲ್ಲಿ, ಅಭಿಯಾನವು ಸರ್ಕಾರಿ ಹಾಗೂ ಮೌಲಾನಾ ಆಜಾದ್ ಶಾಲೆಗಳ ಮೇಲೆ ವಿಶೇಷ ಗಮನಹರಿಸಿ, ಸಮುದಾಯ-ಕೇಂದ್ರಿತ ಕಾರ್ಯತಂತ್ರದ ಮೂಲಕ ತಕ್ಷಣದ ಹಾಗೂ ಸುಸ್ಥಿರ ಬದಲಾವಣೆ ತರಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಅಗತ್ಯವಿದ್ದಲ್ಲಿ ಶಿಕ್ಷಕರಿಗೂ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಎಸ್‌ಐಒ ಜಿಲ್ಲಾ ಅಧ್ಯಕ್ಷ ನಬೀಲ್ ಉಮ್ರಿ, ಘಟಕ ಅಧ್ಯಕ್ಷ ಫುರ್ಖಾನ್ ಅಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.