ಕುಕನೂರು | ಕಿಶೋರಿ ಪಾರ್ಲಿಮೆಂಟ್ ಸಭೆ
ಕುಕನೂರು : ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ವಿಸ್ತಾರ್ ಕನಸು ಕಿಶೋರಿ ಸಂಘಟನೆ ಯೋಜನೆಯ ವತಿಯಿಂದ ಇತ್ತೀಚೆಗೆ ತಾಲ್ಲೂಕು ಮಟ್ಟದ ಕಿಶೋರಿ ಪಾರ್ಲಿಮೆಂಟ್ ಸಭೆಯನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಯಿತು. ಗ್ರಾಮೀಣ ಪ್ರದೇಶದ ಕಿಶೋರಿಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ನೇರವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಈ ವೇದಿಕೆ ಉಪಯುಕ್ತವಾಯಿತು.
ಸಭೆಯ ಆರಂಭದಲ್ಲಿ ಸಭಾಪತಿಗಳಾದ ನಸ್ರೀನ್ ಅವರು ಆಗಮಿಸಿದ ಸಂದರ್ಭದಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಹಾಗೂ ಕಿಶೋರಿಯರು ಎದ್ದು ನಿಂತು ಗೌರವ ಸೂಚಿಸಿದರು. ನಂತರ ಭಾರತದ ಸಂವಿಧಾನದ ಪೀಠಿಕೆಯನ್ನು ಓದಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಸಭೆಯನ್ನು ವಿಶಿಷ್ಟವಾಗಿ ಆರಂಭಿಸಲಾಯಿತು.
ಸಭೆಯಲ್ಲಿ ಕಿಶೋರಿಯರು ತಮ್ಮ ಗ್ರಾಮಗಳಲ್ಲಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಕುರಿತು ಗಮನ ಸೆಳೆದರು. ಗ್ರಾಮಗಳಲ್ಲಿ ಸಮರ್ಪಕ ಬಸ್ ಸೌಲಭ್ಯ ಹಾಗೂ ಬಸ್ ನಿಲ್ದಾಣಗಳ ಕೊರತೆ, ಶಾಲೆಗಳಲ್ಲಿ ಆಟದ ಮೈದಾನ, ಕಾಂಪೌಂಡ್ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು, ಸಾರ್ವಜನಿಕ ಸ್ಥಳಗಳು ಹಾಗೂ ಶಾಲೆಗಳಲ್ಲಿ ಶೌಚಾಲಯಗಳ ಅವ್ಯವಸ್ಥೆ, ಕಿಶೋರಿಯರಿಗೆ ಮುಟ್ಟಿನ ಪ್ಯಾಡ್‌ಗಳ ಸಮರ್ಪಕ ವಿತರಣೆ, ಸಮುದಾಯ ಭವನಗಳು ಹಾಗೂ ಬಸ್ ನಿಲ್ದಾಣಗಳ ಬಳಿ ಸುರಕ್ಷತಾ ಸೂಚನಾ ಫಲಕಗಳ ಅಳವಡಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಕಿಶೋರಿಯರ ಬೇಡಿಕೆಗಳನ್ನು ಆಲಿಸಿದ 15 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO) ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವುದಾಗಿ ಸಕಾರಾತ್ಮಕವಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ವಿಸ್ತಾರ್ ಸಂಸ್ಥೆಯ ನಿರ್ದೇಶಕಿ ಆಶಾ ವಿ., ಕುದರಿಮೋತಿ ಗ್ರಾಮ ಪಂಚಾಯತ್ ಅಧ್ಯಕ್ಷ ಪರಶುರಾಮ ನಾಯಕ, ಶಿರೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಪ್ಪ ಕಡಗತ್ತಿ, ಮಸಬಹಂಚಿನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತಪ್ಪ ಬನ್ನಿಕೊಪ್ಪ, ಕೆಆರ್‌ಪಿ ವಿಜಯಲಕ್ಷ್ಮಿ ಪಟ್ಟಣಶೆಟ್ಟಿ, ನೆಲಜೇರಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶರಣಪ್ಪ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳ ಜನಪ್ರತಿನಿಧಿಗಳು, ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಕಿಶೋರಿಯರು ಉಪಸ್ಥಿತರಿದ್ದರು.
ಕಿಶೋರಿಯರ ಸಮಸ್ಯೆಗಳಿಗೆ ಧ್ವನಿ ನೀಡುವ ಉದ್ದೇಶದ ಈ ಕಿಶೋರಿ ಪಾರ್ಲಿಮೆಂಟ್ ಸಭೆ ಗ್ರಾಮೀಣ ಅಭಿವೃದ್ಧಿಯತ್ತ ಮಹತ್ವದ ಹೆಜ್ಜೆಯಾಗಿ ಪರಿಣಮಿಸಿತು.