ಕೊಪ್ಪಳ | 61 ದಿನ ಪೂರ್ಣಗೊಳಿಸಿದ ಕಾರ್ಖಾನೆ ವಿಸ್ತರಣೆ ವಿರೋಧಿ ಧರಣಿ
ಕೊಪ್ಪಳ : “ಜನರೇ ಇಲ್ಲದ ದೇವರನ್ನು ತೆಗೆದುಕೊಂಡು ಏನು ಮಾಡಬೇಕು. ದೇವರು ಸಮೃದ್ಧಿಯಾಗುವ ಕಾಲದಲ್ಲಿ ಭಕ್ತರು ಸ್ಮಶಾನದ ಕಡೆ ಸಾಗುತ್ತಿದ್ದಾರೆ. ಇಲ್ಲಿನ ಕಾರ್ಖಾನೆಗಳ ಕೊಳವೆಗಳು ಫಿರಂಗಿಗಳಂತೆ ಕಾಣುತ್ತಿವೆ” ಎಂದು ಹಿರಿಯ ಚಿಂತಕ ರಹಮತ್ ತರೀಕೆರೆ ಹೇಳಿದರು.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆಯ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಖಾನೆ ವಿಸ್ತರಣೆ ವಿರೋಧಿ ಅನಿರ್ದಿಷ್ಟ ಧರಣಿಯ 61ನೇ ದಿನದ ಹೋರಾಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತುಂಗಭದ್ರಾ ನದಿ ಚರಂಡಿಯಾಗಿ ಪರಿವರ್ತನೆಗೊಳ್ಳುತ್ತಿದ್ದು, ಇಲ್ಲಿಂದ ಜಿಂದಾಲ್ ವರೆಗೆ ಸುಮಾರು 70 ಕಿಲೋಮೀಟರ್ ಪ್ರದೇಶ ಅಪಾಯಕಾರಿ ಮಾಲಿನ್ಯದ ಕಾರಿಡಾರ್ ಆಗಿದೆ. ಇದು ಜಗತ್ತಿನ ಅತ್ಯಂತ ಕೆಟ್ಟ ಪ್ರದೇಶಗಳ ಪೈಕಿ ಒಂದಾಗಿ ರೂಪುಗೊಳ್ಳುತ್ತಿದೆ. ಕಂಪನಿಗಳ ಪರವಾಗಿ ಕೆಲಸ ಮಾಡುವವರು ಜನರ ಮಧ್ಯೆ ಶತ್ರುತ್ವ ಬಿತ್ತುತ್ತಿರುವುದು ನೋವಿನ ಸಂಗತಿ. ಸರ್ಕಾರಗಳೇ ಜನರ ಮೇಲೆ ಯುದ್ಧ ಸಾರಿದಂತ ಪರಿಸ್ಥಿತಿ ಇಲ್ಲಿದೆ. ಆದ್ದರಿಂದ ಇದು ಎಲ್ಲ ಜನರ ಹೋರಾಟವಾಗಬೇಕು ಎಂದು ಹೇಳಿದರು.
ಕೊಪ್ಪಳದ ಗವಿಮಠದ ಜಾತ್ರೆಯೂ ಜನಪರ ನಿಲುವು ತಾಳಬೇಕು. ಇಲ್ಲಿನ ಧೂಳು, ಹೊಗೆ ಹಾಗೂ ವಿಷವಾಯುಗಳ ವಿರುದ್ಧ ಹೋರಾಟ ನಡೆಯಬೇಕು. ಕಾರ್ಖಾನೆಗಳ ಕೊಳವೆಗಳು ಜನರನ್ನು ಕೊಲ್ಲುವ ಫಿರಂಗಿಗಳಂತೆ ಕಾಣುತ್ತಿವೆ. ಇದು ಬದುಕಿನ ಹಕ್ಕಿನ ಹೋರಾಟವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಇಲ್ಲಿನ ಕೃಷಿ ಸಂಪೂರ್ಣವಾಗಿ ಹಾಳಾಗಿದೆ. ಹೂವುಗಳು ವಿಷವಾಗಿವೆ, ಪರಾಗಸ್ಪರ್ಶವೇ ಇಲ್ಲದಂತಾಗಿದೆ. ಹಸಿರನ್ನು ಸಂಭ್ರಮಿಸುವ ಲಕ್ಷಣವೇ ಇಲ್ಲದಾಗ, ಕವಿಗಳು ವಿಷಾದದ ಗೀತೆ ಬರೆಯಬೇಕಾದ ಸ್ಥಿತಿ ಉಂಟಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಯುವ ರೈತ ಗವಿಸಿದ್ದಪ್ಪ ಪುಟಗಿ ಮಾತನಾಡಿದರು.
ಧರಣಿಯಲ್ಲಿ ಪುಷ್ಪಲತಾ ಏಳುಭಾವಿ, ಬಿ.ಜಿ.ಕರಿಗಾರ, ಸಾವಿತ್ರಿ ಮುಜುಮದಾರ್, ಸಿ.ವಿ. ಜಡಿಯವರ, ಎಸ್.ಬಿ. ರಾಜೂರು, ಗಂಗಾಧರ ಖಾನಾಪೂರ, ರವಿ ಕಾಂತನವರ, ಕವಿ ಮಹೇಶ ಮನ್ನಾಪುರ, ಎಂ.ಡಿ. ಪಾಟೀಲ್, ಶಂಭುಲಿಂಗಪ್ಪ ಆರ್. ಹರಗೇರಿ, ಮಂಜುನಾಥ ಆಟೋ, ಮಂಜುನಾಥ ಕೊಂಡನಹಳ್ಳಿ, ಶಾಂತಯ್ಯ ಅಂಗಡಿ, ಯಲ್ಲಪ್ಪ ಕೋಳೂರು, ಎಸ್. ಮಹಾದೇವಪ್ಪ ಮಾವಿನಮಡು, ಈರಯ್ಯಸ್ವಾಮಿ ಸಾಲಿಮಠ, ಗೀತಾ ಭೋವಿ, ಸದಾಶಿವ ಪಾಟೀಲ್, ರಮೇಶ ಡಂಬ್ರಳ್ಳಿ ಕುಣಿಕೇರಿ, ರಮೇಶ ಕೋಳೂರು, ಶಿವಪ್ಪ ಜಲ್ಲಿ, ಬಸವರಾಜ ನರೇಗಲ್, ಪಾಮಣ್ಣ ಕೆ. ಮಲ್ಲಾಪುರ, ಮಖ್ಬೂಲ್ ರಾಯಚೂರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ಬೆಳಿಗ್ಗೆ ಹಿರಿಯ ವಿಮರ್ಶಕ ಹಾಗೂ ಸಂಶೋಧಕ ರಹಮತ್ ತರೀಕೆರೆ ಅವರು ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ಪ್ರಕಾಶಕ ಡಿ.ಎಂ. ಬಡಿಗೇರ ಹಾಗೂ ಮಾಲಾ ಬಡಿಗೇರ ಅವರೊಂದಿಗೆ ಕಾರ್ಖಾನೆಗಳಿಂದ ಬಾಧಿತಗೊಂಡ ಗಿಣಿಗೇರಿ, ಅಲ್ಲಾನಗರ, ಹಿರೇಬಗನಾಳ, ಚಿಕ್ಕಬಗನಾಳ, ಕುಣಿಕೇರಿ, ಕುಣಿಕೇರಿ ತಾಂಡಾ ಹಾಗೂ ಹಾಲವರ್ತಿ ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿ ವೀಕ್ಷಿಸಿದರು. ಹಿರೇಬಗನಾಳ ಗ್ರಾಮದ ಕರಿಯಮ್ಮ ದೇವಸ್ಥಾನದಲ್ಲಿ ಸೇರಿದ ರೈತರೊಂದಿಗೆ ಚರ್ಚಿಸಿ ಮಾಹಿತಿ ಸಂಗ್ರಹಿಸಿದರು.
ಕಾರ್ಖಾನೆ ವಿರುದ್ಧದ ಈ ಹೋರಾಟದಲ್ಲಿ ಸಾಹಿತ್ಯ ಕ್ಷೇತ್ರದ ರಾಜ್ಯೋತ್ಸವ ಪ್ರಶಸ್ತಿ ಪಡೆದ ನಾಲ್ವರು ದಿಗ್ಗಜರಾದ ಹೆಚ್.ಎಸ್. ಪಾಟೀಲ್, ಪ್ರೊ.ಅಲ್ಲಮಪ್ರಭು ಬೆಟ್ಟದೂರು, ಎ.ಎಂ.ಮದರಿ ಹಾಗೂ ಅತಿಥಿ ರಹಮತ್ ತರೀಕೆರೆ ಭಾಗವಹಿಸಿರುವುದು ಸರ್ಕಾರ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾದ ವಿಷಯವಾಗಿದೆ.
-ಮಂಜುನಾಥ ಜಿ.ಗೊಂಡಬಾಳ, ಹೋರಾಟದ ಸಂಚಾಲಕ