ಕೊಪ್ಪಳ | ದಲಿತ ಯುವಕನ ಮೇಲೆ ಹಲ್ಲೆ ಪ್ರಕರಣ : ಪ್ರತಿಭಟನೆಯ ನಂತರ ಪಿಎಸ್‌ಐ ಅಮಾನತು
ಕುಕನೂರ್ PSI ಗುರುರಾಜ್
ಕೊಪ್ಪಳ: ಸಮಸ್ಯೆ ಹೇಳಲು ಠಾಣೆಗೆ ಬಂದ ದಲಿತ ಯುವಕನ ಮೇಲೆ ಕುಕನೂರು ಪಿಎಸ್‌ಐ ಗುರುರಾಜ್ ಅವರು ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಅರಸಿದ್ಧಿ ಅವರು ತಕ್ಷಣದಿಂದಲೇ ಜಾರಿ ಬರುವಂತೆ ಅಮಾನತು ಮಾಡಿದ್ದಾರೆ.
ನಿನ್ನೆ ( ಮಂಗಳವಾರ) ದಂದು ಗಾಳೆಪ್ಪ ಹಿರೇಮನಿ ಎಂಬವರು ತಮ್ಮ ಸಂಬಂಧಿಕರ ಸಮಸ್ಯೆಯನ್ನು ಹೇಳಿ ನ್ಯಾಯ ಕೊಡಿಸಿ ಎಂದು ಕೇಳಿದ್ದಕ್ಕೆ ಪಿಎಸ್‌ಐ ಅವರು ಕೊರಳ ಪಟ್ಟಿ ಹಿಡಿದು, "ನೀವು ಮಾದಿಗರು ಐದು ನೂರು ರೂಪಾಯಿಗೆ ಚಿಲ್ಲರೆ ಕೆಲಸ ಮಾಡುತ್ತೀರಿ, ನಿಮ್ಮಿಂದ ನಾನು ಕೆಲಸ ಕಲಿಯುವ ಅಗತ್ಯ ಇಲ್ಲ" ಎಂದು ಜಾತಿ ನಿಂದನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದರು. ಇದರ ನಡುವೆ ದಲಿತ ಸಮುದಾಯದವರು ನಿನ್ನೆ ರಾತ್ರಿಯಿಂದಲೇ ಠಾಣೆ ಎದುರು ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.
ಗಾಳಪ್ಪರವರು ತಮ್ಮ ಸಂಬಂಧಿಕರ ಕೌಟುಂಬಿಕ ವಿಷಯವಾಗಿ ದೂರು ನೀಡಲು ಠಾಣೆಗೆ ಬಂದಾಗ ಪಿಎಸ್ಐ ಗುರುರಾಜ ಅವರು ಅವರ ದೂರನ್ನು ಸರಿಯಾಗಿ ಕೇಳದೇ ಅವರೊಂದಿಗೆ ಮಾತನಾಡುವಾಗ ಸಿಟ್ಟಿನ ಭರದಲ್ಲಿ ಗಾಳಪ್ಪ ಅವರನ್ನು ತಳ್ಳಾಡಿ, ಹೊಡೆದು ಅವರೊಂದಿಗೆ ಅನುಚಿತವಾಗಿ ವರ್ತಿಸಿರುವುದು ಠಾಣೆಯ ಸಿಸಿಟಿವಿಯ ದೃಶ್ಯಾವಳಿಗಳಿಂದ ಕಂಡುಬಂದಿದ್ದು, ಇದು ಕೆಸಿಎಸ್ (ನಡತೆ) ನಿಯಮಗಳು 2021 ರ ನಿಯಮ 3 (1) ರ ಸೂಚನೆಗಳನ್ನು ಉಲ್ಲಂಘಿಸಿ, ನಿಮ್ಮ ಕರ್ತವ್ಯದಲ್ಲಿ ಅತೀವ ನಿರ್ಲಕ್ಷ್ಯತನ, ಬೇಜವಾಬ್ದಾರಿತನ ಹಾಗೂ ಕರ್ತವ್ಯಲೋಪವೆಸಗಿರುವುದು ಕಂಡುಬಂದಿರುತ್ತದೆ ಎಂದು ಯಲಬುರ್ಗಾ ವೃತ್ತದ ಸಿಪಿಐ ಅವರು ನೀಡಿದ ವರದಿಯ ಆಧಾರದ ಮೇಲೆ ಅಮಾನತು ಮಾಡಲಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ [ಶಿಸ್ತಿನ ನಡವಳಿ] ನಿಯಮಗಳು 1965 [ತಿದ್ದುಪಡಿ ನಿಯಮ-1989 & 2022] ರ ನಿಯಮ 5 ರ ಪ್ರಕಾರ ಕೊಪ್ಪಳ ಎಸ್‌ಪಿ ಅವರು ತಮ್ಮ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ನಿಮ್ಮನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತಿನಲ್ಲಿಟ್ಟಿದ್ದು, ಸದರಿ ಅಮಾನತಿನಲ್ಲಿರುವ ಕಾಲದಲ್ಲಿ ಪಿಎಸ್‌ಐ ಅವರು ಸಂಬಳದಲ್ಲಿ ಶೇ.50ರಷ್ಟು ಜೀವನಾಧಾರ ಭತ್ಯೆಯನ್ನು ನೀಡಲಾಗುವುದು. ಕರ್ನಾಟಕ ಪೊಲೀಸ್ ಕಾಯ್ದೆಯ ಕಾಲಂ 14 ರ ರೀತ್ಯ ನೀವು ಅಮಾನತಿನ ಮುಂಚೆ ಯಾರ ನಿಯಂತ್ರಣಕ್ಕೊಳಪಟ್ಟಿರುತ್ತೀರೋ ಅಮಾನತಿನ ಅವಧಿಯಲ್ಲಿ ಅದೇ ಅಧಿಕಾರಿಯ ನಿಯಂತ್ರಣದಲ್ಲಿ ಮುಂದುವರೆಯುವುದು, ಅಮಾನತ್ತಿನ ಅವಧಿಯಲ್ಲಿ ಯಾವುದೇ ಬೇರೆ ವ್ಯವಹಾರ ಅಥವಾ ನೌಕರಿಯನ್ನು ಮಾಡುವಂತಿಲ್ಲ.
ತಪ್ಪಿದಲ್ಲಿ ಈ ಮೂಲಕ ನಿಮಗೆ ಸಿಗುವ ಜೀವನಾಧಾರ ಭತ್ಯೆಯನ್ನು ಸಹ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು, ಪ್ರತಿ ತಿಂಗಳು ಬೇರೆ ನೌಕರಿ ಅಥವಾ ವ್ಯವಹಾರ ಮಾಡಿರುವುದಿಲ್ಲವೆಂದು ಈ ಕಚೇರಿಗೆ ಪ್ರಮಾಣ ಪತ್ರವನ್ನು ನೀಡಿ ಜೀವನಾಧಾರ ಭತ್ಯೆಯನ್ನು ಪಡೆಯುವುದು, ಅಮಾನತಿನಲ್ಲಿರುವ ಅವಧಿಯಲ್ಲಿ ನೀವು ನಿಮ್ಮ ವಿಳಾಸವನ್ನು ನಿಮ್ಮ ನೇರ ಅಧಿಕಾರಿಯವರಿಗೆ ತಿಳಿಸಬೇಕು, ನೀವು ಕೇಂದ್ರಸ್ಥಾನ ಬಿಡಬೇಕಾದಲ್ಲಿ ಮೇಲ್ಕಂಡ ಅಧಿಕಾರಿಗಳಿಂದ ಅನುಮತಿ ಪಡೆದು, ಹೋಗುವ ಸ್ಥಳದ ವಿಳಾಸವನ್ನು ನೀಡಿ ಹೋಗತಕ್ಕದ್ದು ಹಾಗೂ ಕೇಂದ್ರ ಸ್ಥಾನವನ್ನು ಅನುಮತಿ ಇಲ್ಲದೇ ಬಿಡತಕ್ಕದ್ದಲ್ಲವೆಂದು ಆದೇಶಿಸಿದ್ದಾರೆ.