ಸಾಂದರ್ಭಿಕ ಚಿತ್ರ

ಕೊಪ್ಪಳ: ಓವರ್ಟೇಕ್ ಮಾಡುವ ಭರದಲ್ಲಿ ಕೆಎಸ್ಸಾರ್ಟಿಸಿ ಬಸ್ಸೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಏಳು ವರ್ಷದ ಬಾಲಕ ಮೃತಪಟ್ಟ ಘಟನೆ ಕುಷ್ಟಗಿ ತಾಲೂಕಿನ ವಣಗೇರಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.

ಮೃತ ಬಾಲಕನನ್ನು ಪರಶುರಾಮ ಗಧಾರಿ (7) ಎಂದು ಗುರುತಿಸಲಾಗಿದೆ. ಈತ ಒಂದನೇ ತರಗತಿಯಲ್ಲಿ ಓದುತ್ತಿದ್ದ. ಅಪಘಾತದಲ್ಲಿ ಬೈಕ್ ಸವಾರ ಯಮನೂರಪ್ಪ ಚೌರ್ ಎಂಬವರು ಗಾಯಗೊಂಡಿದ್ದಾರೆ.

ಪರಶುರಾಮ ಗುರುವಾರ ತನ್ನ ತಾಯಿಯ ಚಿಕ್ಕಪ್ಪನೊಂದಿಗೆ ಬೈಕಿನಲ್ಲಿ ಕುಷ್ಟಗಿಯಿಂದ ವಣಗೇರಿ ಗ್ರಾಮದ ಕಡೆಗೆ ತೆರಳುತ್ತಿದ್ದ. ಈ ವೇಳೆ ಕೊಪ್ಪಳ–ವಿಜಯಪುರ ಮಾರ್ಗದ ಕೆಎಸ್ಸಾರ್ಟಿಸಿ ಬಸ್ ಬೈಕ್ ಅನ್ನು ಹಿಂದಿಕ್ಕಲು ಮುಂದಾಗಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ವೇಳೆ ರಸ್ತೆಗೆ ಬಿದ್ದ ಬಾಲಕನ ಮೈಮೇಲೆ ಬಸ್ಸಿನ ಚಕ್ರ ಹರಿದ ಪರಿಣಾಮ ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ಅಪಘಾತದ ಬಳಿಕ ಬಸ್ ಚಾಲಕ ಕುಷ್ಟಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor