ಕೊಪ್ಪಳ | ಬಸಪ್ಪ ಚೌಡ್ಕಿಗೆ ʼʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼ
ಬಸಪ್ಪ ಚೌಡ್ಕಿ
ಕೊಪ್ಪಳ : ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ 2025-26ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಬಸಪ್ಪ ಚೌಡ್ಕಿ ಅವರು "ಜಾನಪದ" ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ತಾಲೂಕಿನ ತೆಗ್ಗಿಹಾಳ ಗ್ರಾಮದ ಬಸಪ್ಪ ಚೌಡ್ಕಿಯವರು ತಮ್ಮ ಮುತ್ತಾತನಕಾಲದಿಂದಲು ವಂಶ ಪರಂಪರೆಯಾಗಿ ಬಂದಿರುವ ಚೌಡ್ಕಿ ಪದಗಳನ್ನು ಬಾಲ್ಯಂದಿದಲೂ ತಂದೆಯವರೊಂದಿಗೆ ಧ್ವನಿ ಗೂಡಿಸುತ್ತಾ. ರೂಢಿ ಮಾಡಿಕೊಂಡು ಬಂದಿದ್ದಾರೆ.
ಬಸಪ್ಪ ಚೌಡ್ಕಿ ಯವರು ಅವಿದ್ಯಾವಂತರಾದರೂ ಸಹ ತಮ್ಮ ಪರಂಪರೆಯನ್ನು ಮೈಗೂಡಿಸಿಕೊಂಡು ಕಲೆ ಉಳಿಸಿ ಬೆಳೆಸುತ್ತಾ ಬಂದಿದ್ದಾರೆ. 93ರ ಇಳಿಯ ವಯಸ್ಸಿನಲ್ಲಿ ಸಹ ಚೌಡ್ಕಿ ನುಡಿಸುತ್ತಾ, ಭಿಕ್ಷಾಟನೆಯೊಂದಿಗೆ ಮೂಲ ಚೌಡಿಕೆ ಪದಗಳನ್ನು ಉಳಿಸಿ ಬೆಳೆಸುತ್ತಾ ಬಂದಿದ್ದಾರೆ.
ಚೌಡ್ಕಿ ಪದಗಳು ಅಲ್ಲದೇ, ಗೀಗೀ ಪದ, ರಿವಾಯತ್ ಪದ, ತತ್ವಪದ, ಶ್ರೀಕೃಷ್ಣ ಪಾರಿಜಾತದಲ್ಲಿ ರಾಧೆಯಾಗಿ, ನೂರಾರು ಸಣ್ಣಾಟಗಳಲ್ಲಿ ಅಭಿನಯಿಸಿ, ನಟರಾಗಿ, ಗಾಯಕರಾಗಿದ್ದಾರೆ.
ಆನೆಗೊಂದಿ ಉತ್ಸವ ಕೊಪ್ಪಳ ಜಿಲ್ಲಾ ಮಟ್ಟದ ಯುವಜನ ಮೇಳ, ಜಿಲ್ಲಾ ಮಟ್ಟದ ಜಾನಪದ ಕಲಾ ತರಬೇತಿ ಶಿಬಿರ , ಜಾನಪದ ಜಾತ್ರೆ, ಕರ್ನಾಟಕ ಜಾನಪದ ಅಕಾಡೆಮಿ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಗಂಗಾವತಿ ಸೇರಿದಂತೆ ಆಕಾಶವಾಣಿಯಲ್ಲಿ ಹಾಗೂ ಲೋಕಸಿರಿ ಕರ್ನಾಟಕ ಜಾನಪದ ಪರಿಷತ್ತಿನ ಆಶ್ರಯದಲ್ಲಿ ರಾಮನಗರ ಜಾನಪದ ಲೋಕದಲ್ಲಿ ಲೋಕಸಿರಿ- ಕಾರ್ಯಕ್ರಮದಲ್ಲಿ ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ ಚೌಡಿಕೆ ಪದಗಳನ್ನು ಹಾಡಿ ತಮ್ಮ ಬದುಕಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕ ಜಾನಪದ ಅಕಾಡೆಮಿಯ 2010ನೇ ಸಾಲಿನ ವಾರ್ಷಿಕ ಪ್ರಶಸ್ತಿ ಅಲ್ಲದೇ ನೂರಾರು ಸಂಘ, ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.