×
Ad

ಕೊಪ್ಪಳ | ‘ಪೊಲೀಸ್ ಕೆಲಸಕ್ಕಿಂತ ಎಗ್ ರೈಸ್ ಮಾರೋದೇ ಮೇಲು’

ವಾಟ್ಸ್‌ ಆ್ಯಪ್ ಸ್ಟೇಟಸ್ ಮೂಲಕ ಅಸಮಾಧಾನ ಹೊರಹಾಕಿದ ಕೊಪ್ಪಳದ ಕಾನ್‌ಸ್ಟೇಬಲ್

Update: 2026-02-02 23:02 IST

ಕೊಪ್ಪಳ : ವರ್ಷಪೂರ್ತಿ ರಜೆ ಇಲ್ಲದ ಕೆಲಸದ ಒತ್ತಡದಿಂದ ಬೇಸತ್ತು, ಪೊಲೀಸ್ ಕೆಲಸಕ್ಕಿಂತ ಎಗ್ ರೈಸ್ ಮಾರುವುದು ಉತ್ತಮ ಎಂದು ವಾಟ್ಸ್‌ ಆ್ಯಪ್ ಸ್ಟೇಟಸ್ ಹಾಕಿರುವ ಕೊಪ್ಪಳ ಜಿಲ್ಲೆಯ ಪೊಲೀಸ್ ಕಾನ್‌ ಸ್ಟೇಬಲ್ ಒಬ್ಬರು ರಾಜ್ಯದ ಗಮನ ಸೆಳೆದಿದ್ದಾರೆ.

ಕುಷ್ಟಗಿ ತಾಲೂಕಿನ ಹನಮಸಾಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೇದೆ ಬ್ರಹ್ಮಾನಂದ ಅವರೇ ಈ ವಿವಾದದ ಕೇಂದ್ರಬಿಂದು.

‘‘ವರ್ಷದ 365 ದಿನವೂ ಕೆಲಸ, ಒಂದು ದಿನವೂ ರಜೆ ಇಲ್ಲ. ಹಬ್ಬ ಹರಿದಿನಗಳಿಲ್ಲದ ಈ ಸೇವೆಗಿಂತ ರಸ್ತೆ ಬದಿಯಲ್ಲಿ ನಿಂತು ಎಗ್ ರೈಸ್ ಮಾರಿ ಬದುಕುವುದು ಎಷ್ಟೋ ಉತ್ತಮ’’ ಎಂದು ಬ್ರಹ್ಮಾನಂದ ತಮ್ಮ ಸ್ಟೇಟಸ್‌ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸ್ ಇಲಾಖೆಯ ಕೆಳಹಂತದ ಸಿಬ್ಬಂದಿಯ ಮೇಲೆ ಇರುವ ಕೆಲಸದ ಒತ್ತಡಕ್ಕೆ ಕನ್ನಡಿ ಹಿಡಿದಂತಾಗಿದೆ.

ಇತ್ತೀಚೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಅವರು ರಾಜ್ಯದಲ್ಲಿ ಖಾಲಿ ಇರುವ 8,300 ಪೊಲೀಸ್ ಹುದ್ದೆಗಳಿಗೆ ಶೀಘ್ರವೇ ನೇಮಕಾತಿ ನಡೆಸಲಾಗುವುದು ಎಂದು ಘೋಷಿಸಿದ್ದ ಹಿನ್ನೆಲೆಯಲ್ಲಿ, ಅದಕ್ಕೆ ಪ್ರತಿಕ್ರಿಯೆಯೆಂಬಂತೆ ಈ ಸ್ಟೇಟಸ್ ಬಂದಿದೆ ಎನ್ನಲಾಗಿದೆ. ಪೊಲೀಸ್ ಇಲಾಖೆಗೆ ಸೇರುವ ಮೊದಲು ನೂರು ಬಾರಿ ಯೋಚಿಸಿ ಎಂದು ಯುವಕರಿಗೆ ಎಚ್ಚರಿಕೆ ನೀಡುವ ಧಾಟಿಯಲ್ಲೂ ಪೇದೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಇಲಾಖೆ ಶಿಸ್ತುಬದ್ಧ ಸಂಸ್ಥೆಯಾಗಿದ್ದು, ಒಳಗಿನ ಸಮಸ್ಯೆಗಳನ್ನು ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸುವುದು ಶಿಸ್ತು ಉಲ್ಲಂಘನೆಗೆ ಸಮಾನ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಸಮವಸ್ತ್ರಧಾರಿಯಾಗಿ ಸೇವೆ ಸಲ್ಲಿಸುವ ಸಿಬ್ಬಂದಿಯಿಂದ ಇಂತಹ ನಡೆ ಯೋಗ್ಯವಲ್ಲ ಎಂದು ಹಿರಿಯ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ವಾಟ್ಸ್‌ ಆ್ಯಪ್ ಸ್ಟೇಟಸ್ ವೈರಲ್ ಆದ ಕೂಡಲೇ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದ್ದಾರೆ. ತನಿಖಾ ವರದಿ ಆಧರಿಸಿ ಪೇದೆ ಬ್ರಹ್ಮಾನಂದ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಘಟನೆ ಪೊಲೀಸ್ ಸಿಬ್ಬಂದಿಯ ಕೆಲಸದ ಒತ್ತಡ, ರಜೆ ವ್ಯವಸ್ಥೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ಪೊಲೀಸ್ ಡಿಜಿ ಐಜಿಪಿ ಸಲೀಂ ಅವರು ಪೊಲೀಸ್ ಸಿಬ್ಬಂದಿಗೆ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ಕಡ್ಡಾಯ ರಜೆ ನೀಡಿ ಆದೇಶಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - Reshma

contributor

Similar News