Kuknoor | ಬನ್ನಿಕೊಪ್ಪದಲ್ಲಿ ನಿವೇಶನಗಳ ಹಂಚಿಕೆ : 122 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ
ಕುಕನೂರು : ತಾಲೂಕಿನ ಬನ್ನಿಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಎಂಟು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಾಜೀವಗಾಂಧಿ ವಸತಿ ನಿಗಮದ ನಿವೇಶನಗಳ ಹಂಚಿಕೆ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ ವೆಂಕಟಾಪುರ ಅವರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ವೀರಪ್ಪ ಗೊಂದಿ, ವಿಜಯಲಕ್ಷ್ಮಿ ಯರಾಶಿ, ಮಹೇಶ್ ತಳವಾರ, ಜುನಾಭಿ ವಾಲಿಕಾರ್, ಲಲಿತಮ್ಮ ಹರಿಜನ, ಶಾಂತಮ್ಮ ಆಲೂರ, ಊರಿನ ಹಿರಿಯರು, ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸೇರಿ ನಿವೇಶನಗಳನ್ನು ಅಳತೆ ಮಾಡಿ, ಕಲ್ಲು ಹಾಕಿ, ನಂಬರ್ ಮಾರ್ಕಿಂಗ್ ಮಾಡಿ ನಿವೇಶನರಹಿತ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಯಿತು.
ನಿವೇಶನ ಪಡೆದ ಫಲಾನುಭವಿಗಳು ಆದಷ್ಟು ಬೇಗ ಮ್ಯೂಟೇಶನ್ ಮಾಡಿಕೊಂಡು 9/11 ದಾಖಲಾತಿ ಪಡೆಯಬೇಕು ಎಂದು ಸಲಹೆ ನೀಡಿದರು. ರಾಜೀವಗಾಂಧಿ ವಸತಿ ನಿಗಮದಡಿ ಮಂಜೂರಾದ ಒಟ್ಟು 144 ನಿವೇಶನಗಳಲ್ಲಿ 122 ಜನ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಉಳಿದ 20 ನಿವೇಶನಗಳನ್ನು ಟರಾವು ಮಾಡಲಾಗಿದ್ದು, ಇನ್ನೂ ಎರಡು ನಿವೇಶನಗಳನ್ನು ಕಾಯ್ದಿರಿಸಲಾಗಿದೆ.
ನಿವೇಶನ ಬಡಾವಣೆಯಲ್ಲಿ ಸಿಸಿ ರಸ್ತೆ, ಚರಂಡಿ, ವಿದ್ಯುತ್ ಕಂಬಗಳು ಹಾಗೂ ನಳದ ನೀರಿನ ವ್ಯವಸ್ಥೆ ಕಲ್ಪಿಸುವ ಕುರಿತು ಶಾಸಕರಿಗೆ ಪತ್ರ ಬರೆಯಲಾಗಿದ್ದು, ಶೀಘ್ರದಲ್ಲೇ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಲಾಗುವುದಾಗಿ ಭರವಸೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಫಲಾನುಭವಿ ಸುರೇಶ್ ನಾಯಕ ಮಾತನಾಡಿ, ಈ ನಿವೇಶನಗಳು ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದವು. ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ ವೆಂಕಟಾಪುರ ಅವರ ಪ್ರಯತ್ನದಿಂದ ಬಡವರಿಗೆ ನಿವೇಶನಗಳ ಹಂಚಿಕೆ ಸಾಧ್ಯವಾಗಿದೆ. ಸಿಸಿ ರಸ್ತೆ, ಚರಂಡಿ ಹಾಗೂ ಮನೆಗಳ ಮಂಜೂರಾತಿಯಿಂದ ಈ ಭಾಗದ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.