×
Ad

ಕೊಪ್ಪಳ | ಬಿಎಸ್‌ಪಿಎಲ್ ಕಾರ್ಖಾನೆ ವಿರೋಧಿಸಿ ಅನಿರ್ದಿಷ್ಟಾವಧಿ ಧರಣಿ ಆರಂಭ

Update: 2025-10-31 20:01 IST

ಕೊಪ್ಪಳ: ಉದ್ಯೋಗ ಸೃಷ್ಟಿ ಮಾಡಲು ಕಾರ್ಖಾನೆ ಬೇಕು ಎಂದೇನಿಲ್ಲ, ಅವುಗಳಿಂದ ಎಲ್ಲಾ ಸಮಸ್ಯೆ ಪರಿಹಾರ ಆಗಿದೆ ಎಂಬುದು ಕೇವಲ ಭ್ರಮೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಭಿಪ್ರಾಯಪಟ್ಟರು.

ಅವರು ಇಲ್ಲಿನ ನಗರಸಭೆ ಸಂಕೀರ್ಣದ ಮುಂದೆ ಜಂಟಿ ಕ್ರಿಯಾ ವೇದಿಕೆ (ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ) ಮೂಲಕ ಹಮ್ಮಿಕೊಂಡಿರುವ ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ, ಮುಕುಂದ ಸುಮಿ, ಎಕ್ಸ್ ಇಂಡಿಯಾ ಸೇರಿ ಎಲ್ಲಾ ಕಾರ್ಖಾನೆಗಳ ವಿಸ್ತೀರ್ಣ ಮತ್ತು ಆರಂಭವನ್ನು ವಿರೋಧಿಸಿ ಅನಿರ್ದಿಷ್ಟವಾದಿ ಧರಣಿ ಸತ್ಯಾಗ್ರಹಕ್ಕೆ ಗಾಂಧೀಜಿ ಮತ್ತು ಬಾಬಾಸಾಹೇಬರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಇಲ್ಲಿ ಹಣ ಹೂಡಿಕೆ ಮಾಡುವುದು ದೊಡ್ಡ ಸಂಗತಿ ಎಂದು ಭಾವಿಸಿರುವುದೇ ಬಹುದೊಡ್ಡ ತಪ್ಪು. ಹಣದ ಲೆಕ್ಕದಲ್ಲಿ ಜನರಿಗೆ ಬದುಕು ಸಿಗಲ್ಲ. ಜಿಂದಾಲ್ ನಂತಹ ಬೃಹತ್ ಕಾರ್ಖಾನೆ ಏನು ಹೇಳಿ ಬಳ್ಳಾರಿಯಲ್ಲಿ ಬಂದಿತ್ತು ಅದ್ಯಾವುದೂ ಆಗದೇ ಅಲ್ಲಿ ಜನ ಕಂಗಾಲಾಗಿದ್ದಾರೆ, ಬಹುತೇಕ ಕಂಪನಿಗಳು ಈಗ ಉದ್ಯೋಗ ಕಡಿತ ಆರಂಭಿಸಿವೆ. ಈಗ ಉದ್ಯೋಗ ಕೊಡ್ತಿವಿ ಅಂದವರು ಮುಂದೆ ಕೊಡಲು ಸಾಧ್ಯವಿಲ್ಲ ಎನ್ನುತ್ತಾರೆ. ಅದು ಏನೇ ಇದ್ದರೂ ಉದ್ಯೋಗಕ್ಕಿಂತ ಮೊದಲು ಆರೋಗ್ಯ ಹಾಗೂ ಬದುಕು ಮುಖ್ಯ ಎಂದರು.

ರೈತ ಚಳುವಳಿಯ ಮುಂಚೂಣಿ ನಾಯಕ ಚಾಮರಸ ಮಾಲಿಪಾಟೀಲ್ ಮಾತನಾಡಿ, ಕಾರ್ಖಾನೆಗಳಿಂದ ಬರುತ್ತಿರುವ ಧೂಳು ಮತ್ತು ಹೊಗೆಯಿಂದ ಪರಿಸರ ವಿನಾಶವಾಗಿದೆ, ಬೆಳೆ ಹೋಗಿದೆ, ಬೆಳೆ ವಿಷಕಾರಿಯಾಗಿವೆ ಜೊತೆಗೆ ಇಲ್ಲಿನ ನದಿಯಿಂದ ನೀರನ್ನು ಹೇರಳವಾಗಿ ಬಳಸಿಕೊಂಡು ರೈತರಿಗೆ ಎರಡನೆ ಬೆಳೆಗೆ ನೀರಿಲ್ಲ, ಕುಡಿಯುವ ನೀರು ಮಲಿನವಾಗಿವೆ ಎಂಬ ಸಾಮಾನ್ಯ ಪ್ರಜ್ಞೆ ಇಟ್ಟುಕೊಳ್ಳದಿರುವದು ವಿಷಾಧಕರ ಸಂಗತಿ ಎಂದರು. 

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ.ಗೊಂಡಬಾಳ, ಸಭೆಯ ಅಧ್ಯಕ್ಷತೆ ವಹಿಸಿಕೊಂಡ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಎ.ಎಂ.ಮದರಿ, ಮಹಿಳಾ ಹೋರಾಟಗಾರ್ತಿ ಶಶಿಕಲಾ, ಜಂಟಿ ಕ್ರಿಯಾ ವೇದಿಕೆ ಹೋರಾಟ ಸಂಚಾಲಕರಾದ ಕೆ.ಬಿ.ಗೋನಾಳ, ಡಿ. ಹೆಚ್.ಪೂಜಾರ, ಮಂಜುನಾಥ ಜಿ.ಗೊಂಡಬಾಳ, ಮಹಾಂತೇಶ ಕೊತಬಾಳ, ನಜೀರಸಾಬ್ ಮೂಲಿಮನಿ, ಶರಣು ಗಡ್ಡಿ, ಎಸ್.ಎ.ಗಫಾರ್, ಬಸವರಾಜ ಶೀಲವಂತರ, ಎಸ್.ಬಿ.ರಾಜೂರ, ರವಿ ಕಾಂತನವರ, ಚಿಟ್ಟಿಬಾಬು ಸಿಂಧನೂರು, ಭೀಮಸೇನ ಕಲಿಕೇರಿ, ಶರಣು ಪಾಟೀಲ್, ಹನುಮಂತಪ್ಪ, ಬಸವರಾಜ ಯರದಿಹಾಳ, ಮೂಕಣ್ಣ ಮೇಸ್ತ್ರಿ, ಮಂಗಳೇಶ ರಾಠೋಡ, ಬಸವರಾಜ ನರೆಗಲ್, ರಮೇಶ ಪಾಟೀಲ್ ಬೇರಿಗಿ, ಗವಿಸಿದ್ದಪ್ಪ ಹಲಿಗಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಮಹಾದೇವಪ್ಪ ಮಾವಿನಮಡು, ದುರುಗೇಶ ಹಿರೇಮನಿ ವಟಪರ್ವಿ, ಸುಂಕಮ್ಮ ಗಾಂಧಿನಗರ, ಭೀಮಪ್ಪ ಯಲಬುರ್ಗಾ, ಚನ್ನಬಸಪ್ಪ ಅಪ್ಪಣ್ಣವರ ಅನೇಕರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News