ಕೊಪ್ಪಳ | ಕನ್ನಡ ಭಾಷೆ ಅತ್ಯಂತ ಹಳೆಯ, ಶ್ರೀಮಂತ ಭಾಷೆ : ಪ್ರೊ.ಬಿ.ಕೆ ರವಿ
ಕೊಪ್ಪಳ : ಕನ್ನಡ ಭಾಷೆ ಅತ್ಯಂತ ಹಳೆಯ ಹಾಗೂ ಶ್ರೀಮಂತ ಭಾಷೆಯಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡಕ್ಕೆ ಒಳ್ಳೆಯ ಸ್ಥಾನಮಾನವಿದೆ. ಇದಕ್ಕೆ ಬದುಕನ್ನು ಕಟ್ಟಿಕೊಡುವ ಶಕ್ತಿ ಇದೆ. ಹೀಗಾಗಿ ಯುವ ಜನಾಂಗ ನನ್ನ ನಾಡು, ನನ್ನ ಭಾಷೆ, ನನ್ನ ರಾಷ್ಟ್ರ ಎಂಬ ಪ್ರೀತಿ, ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ ಬಿ.ಕೆ ರವಿಯವರು ಕರೆ ನೀಡಿದರು.
ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ನಡೆದ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕದ ಏಕೀಕರಣದ ನಂತರ ಕನ್ನಡ ರಂಗಭೂಮಿ, ಕನ್ನಡ ಪತ್ರಿಕೋದ್ಯಮ, ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ಪ್ರೋತ್ಸಾಹ ಸಿಕ್ಕಿದ್ದು, ಭಾರಿ ಪ್ರಮಾಣದಲ್ಲಿ ಪ್ರಗತಿ ಕಂಡಿವೆ. ಕೊಪ್ಪಳ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಸಮಾನತೆಯ ಹರಿಕಾರ ಬಸವಣ್ಣ ನಡೆದಾಡಿದ ಪುಣ್ಯದ ನೆಲವಾಗಿದೆ. ಇವರ ಕಾಲಘಟ್ಟದಲ್ಲಿ ರಚಿತವಾದ ವಚನ ಸಾಹಿತ್ಯವು ಜನರಿಗೆ ತೀರ ಹತ್ತಿರದ ಸಾಹಿತ್ಯವಾಗಿದೆ ಎಂದು ಅವರು ಹೇಳಿದರು.
ಈ ವೇಳೆ ಮಾತನಾಡಿದ ವಿ.ವಿ.ಯ ಕುಲಸಚಿವರಾದ ಕೆ.ವಿ.ಪ್ರಸಾದ್, ಕನ್ನಡ ನಾಡು ಅತಿ ಹೆಚ್ಚಿನ ಜ್ಞಾನಪೀಠ, ಅನೇಕ ಸಾಹಿತ್ಯಿಕ ಪ್ರಶಸ್ತಿಗಳನ್ನು ಪಡೆದ ನಾಡು. ಇಲ್ಲಿ ನಾವುಗಳು ಜನಿಸಿರುವುದೇ ಒಂದು ಪುಣ್ಯ. ಈ ನಾಡು, ಭಾಷೆಯನ್ನು ಪ್ರತಿಯೊಬ್ಬರೂ ಬೆಳೆಸಬೇಕು, ಪ್ರೀತಿಸಬೇಕೆಂದರು.
ವಿ.ವಿ ಆಡಳಿತಾಧಿಕಾರಿಗಳಾದ ತಿಮ್ಮಾರೆಡ್ಡಿಮೇಟಿರವರು ಮಾತನಾಡಿದರು.
ಈ ವೇಳೆ, ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು