×
Ad

ಕೊಪ್ಪಳ | ಮಹಾತ್ಮ ಗಾಂಧೀಜಿಯವರು ಸ್ವಚ್ಛತೆ, ಸರಳತೆಗೆ ಮಹತ್ವ ನೀಡಿದ್ದರು : ಡಿಸಿ ಸುರೇಶ ಬಿ.ಇಟ್ನಾಳ

ಗಾಂಧೀಜಿ, ಲಾಲ್ ಬಹದ್ದೂರು ಶಾಸ್ತ್ರಿ ಜಯಂತಿ

Update: 2025-10-02 18:35 IST

ಕೊಪ್ಪಳ : ಮಹಾತ್ಮ ಗಾಂಧೀಜಿಯವರು ಸತ್ಯ, ಶಾಂತಿ, ಅಹಿಂಸೆಯ ಜೊತೆಗೆ ಸ್ವಚ್ಛತೆ ಮತ್ತು ಸರಳತೆಗೆ ಮಹತ್ವ ನೀಡಿದ್ದರು ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಹೇಳಿದರು.

ಗುರುವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ತರಬೇತಿ ಕೇಂದ್ರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿಯವರ 156ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗಾಂಧೀಜಿ ಎಂದಾಕ್ಷಣ ಸ್ವಾವಲಂಭನೆ, ಸ್ವದೇಶಿ ವಸ್ತುಗಳ ಬಳಕೆ, ಬಡವರು, ಮಹಿಳೆಯರು, ದಲಿತರ ಉದ್ದಾರ, ವಿದ್ಯಾರ್ಥಿಗಳ ಕಲಿಕೆ ಮತ್ತು ಸ್ವಚ್ಛತೆ ನಮ್ಮೆದುರು ಬರುತ್ತವೆ. ಗ್ರಾಮೀಣ ಅಭಿವೃದ್ಧಿಯ ನಿಟ್ಟಿನಲ್ಲಿ ಸ್ವರಾಜ್ಯ ಗಾಂಧೀಜಿಯವರ ಪ್ರಮುಖ ಆಶಯವಾಗಿತ್ತು. ಇಂದಿಗೂ ಅವರ ಪರಿಕಲ್ಪನೆಗಳು ಪ್ರಸ್ತುತವಾಗಿವೆ ಎಂದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜಮದಾರ ಮಾತನಾಡಿ, ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ಅನುಸರಿಸಿ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರು. ಮಹಿಳೆಯರಿಗೂ ಮಹತ್ವ ನೀಡಿದ ಅವರು ದೀನ-ದಲಿತರ, ರೈತರ, ಹಳ್ಳಿಯ ಜನರ ಹಿತಾಸಕ್ತಿಯಲ್ಲಿ ಬದುಕಿದರು ಎಂದರು.

ಬಾಪೂಜಿ ಪ್ರಬಂಧ ಸ್ಪರ್ಧೆ :

ವಾರ್ತಾ ಇಲಾಖೆಯಿಂದ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ನಗದು ಬಹುಮಾನಗಳನ್ನು ವಿತರಿಸಲಾಯಿತು.

ಗಾಂಧೀ ಭಜನೆ :

ಭಾಷು ಕಿನ್ನಾಳ ಹಾಗೂ ತಂಡ ಗಾಂಧೀಜಿಯವರಿಗೆ ಪ್ರಿಯವಾಗಿದ್ದ ಭಜನೆಗಳನ್ನು ಹಾಡಿ ಭಕ್ತಿಭಾವ ಮೂಡಿಸಿದರು. ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಜಿ. ಸುರೇಶ್ ಸ್ವಾಗತಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಲ್ಲಾ ಪಂಚಾಯತ್ ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ, ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು, ಉಪನಿರ್ದೇಶಕ ಜಗದೀಶ್, ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಟಿ. ಲಿಂಗರಾಜು, ಪಶುಪಾಲನಾ ಉಪನಿರ್ದೇಶಕ ಡಾ. ಪಿ.ಎಂ. ಮಲ್ಲಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ದೈಹಿಕ ಶಿಕ್ಷಣಾಧಿಕಾರಿ ಎ. ಬಸವರಾಜ ಸೇರಿದಂತೆ ಅನೇಕ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News