×
Ad

ಕೊಪ್ಪಳ | ರಸ್ತೆ ಸುರಕ್ಷತೆಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಿ : ಡಿಸಿ ಸುರೇಶ್ ಇಟ್ನಾಳ

Update: 2025-11-06 17:52 IST

ಕೊಪ್ಪಳ: ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿದಾಗ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತವೆ. ಹಾಗಾಗಿ ರಸ್ತೆ ಸುರಕ್ಷತೆಗೆ ಹೆಚ್ಚಿನ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ.ಸುರೇಶ್ ಬಿ.ಇಟ್ನಾಳ ಹೇಳಿದರು.

ಅವರು ಗುರುವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಸ್ತೆ ಸುರಕ್ಷತೆಗಾಗಿ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಕೆ.ಕೆ.ಆರ್.ಟಿ.ಸಿ ಸಹಯೋಗದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಹಮ್ಮಿಕೊಳ್ಳಬೇಕು. ಅಲ್ಲದೇ ಪ್ರಾದೇಶಿಕ ಸಾರಿಗೆ ಇಲಾಖೆಯವರು ಶಾಲಾ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಪ್ರತಿ ಶಾಲಾ ಕಾಲೇಜುಗಳಿಗೆ ತೆರಳಿ ರಸ್ತೆ ಸುರಕ್ಷತಾ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು ಬಸ್ಸುಗಳಿಗೆ ಜಿ.ಪಿ.ಆರ್.ಎಸ್. ಅಳವಡಿಸಬೇಕು. ಜಿ.ಪಿ.ಆರ್.ಎಸ್. ಅಳವಡಿಸದ ಶಾಲಾ ವಾಹನಗಳನ್ನು ಸೀಝ್ ಮಾಡಲು ಕ್ರಮ ಕೈಗೊಳ್ಳಬೇಕು. ವಾಹನ ಚಾಲಕರಿಗೆ ಮಕ್ಕಳ ಸುರಕ್ಷೆಗಳ ಬಗ್ಗೆಯೂ ತಿಳಿಸಬೇಕು. ಎಲ್ಲಾ ಶಾಲಾ ಕಾಲೇಜು ಬಸ್ಸುಗಳಿಗೆ ಹಾಗೂ ಸರ್ಕಾರಿ ಕಚೇರಿ ವಾಹನಗಳನ್ನು ಸರಿಯಾಗಿ ಪರಿಶೀಲಿಸಿ ವಾಹನ ಅಗತ್ಯ ಪ್ರಮಾಣ ಪತ್ರವನ್ನು ನೀಡಬೇಕು ಎಂದರು.

ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳ ಮತ್ತು ಫ್ಲೈ ಓವರ್‌ಗಳಲ್ಲಿರುವ ರಸ್ತೆ ಗುಂಡಿಗಳನ್ನು ಕೂಡಲೇ ಮುಚ್ಚುವಂತೆ ಅಗತ್ಯ ಕೈಗೊಳ್ಳಬೇಕು ಮತ್ತು ಈ ಬಗ್ಗೆ ಸರ್ವಿಸ್ ರಸ್ತೆಗಳಲ್ಲಿಯೂ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು. ಬ್ಲಾಕ್‌ಸ್ಪಾಟ್ ರಸ್ತೆಗಳಲ್ಲಿ ಸಿಸಿಟಿವಿ ಹಾಗೂ ವಿದ್ಯುತ್ ದೀಪಗಳನ್ನು ಅಳವಡಿಕೆ ಕಡ್ಡಾಯ. ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿಗಳಲ್ಲಿ ವಿದ್ಯುತ್ ದೀಪ, ಸಿಸಿಟಿವಿ ಮತ್ತು ಸಾರ್ವಜನಿಕರಿಗೆ ಇತರೆ ಅಗತ್ಯ ಸೌಲಭ್ಯಗಳ ಕಲ್ಪಿಸುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿನ ಅನಧಿಕೃತ ರಸ್ತೆ ಉಬ್ಬುಗಳನ್ನು ತೆರವುಗೊಳಿಸಬೇಕು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈಗಾಗಲೇ ಅಳವಡಿಸಿರುವ ವಿದ್ಯುತ್ ದೀಪ, ಸ್ಪೀಡ್‌ಗನ್ ಮತ್ತು ಸಿ.ಸಿ.ಟಿ.ವಿ ಕ್ಯಾಮೆರಾಗಳು ಎಲ್ಲವೂ ಕಾರ್ಯ ಸ್ಥಿತಿಯಲ್ಲಿರಬೇಕು. ಈ ಬಗ್ಗೆ ಅವುಗಳ ಸೂಕ್ತ ನಿರ್ವಹಣೆಯಾಗಬೇಕು. ರಸ್ತೆ ಸುರಕ್ಷತೆ ಕುರಿತು ರಸ್ತೆಗಳಲ್ಲಿ ಕಡ್ಡಾಯವಾಗಿ ಮಾಹಿತಿ ಫಲಕ ಹಾಗೂ ಸೂಚನಾ ಫಲಕಗಳ ಅಳವಡಿಸಿರಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರು ಮಾತನಾಡಿ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಅತೀ ವೇಗವಾಗಿ ವಾಹನ ಚಲಾಯಿಸುವುದು ಮತ್ತು ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸುವುದರ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಂಚರಿಸುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಆ್ಯಪ್ ಕುರಿತು ಮಾಹಿತಿ :

ರಸ್ತೆ ಅಪಘಾತಗಳ ಸಂದರ್ಭದಲ್ಲಿ ಸ್ಥಳ ಪರಿಶೀಲನೆ ಮತ್ತು ಇತರೆ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಲು ಪೊಲೀಸ್ ಇಲಾಖೆ ಹಾಗೂ ಆರ್.ಟಿ.ಓ ಅಧಿಕಾರಿಗಳಿಗೆ ಸಹಾಯವಾಗುವ ಮತ್ತು ಜಿಲ್ಲಾ ರಸ್ತೆ ಸುರಕ್ಷಾ ಸಮಿತಿಗಳಿಗೆ ಅನುಕೂಲವಾಗುವ ಸಂಜಯ್ ಆ್ಯಪ್ ಕುರಿತು ಮದ್ರಾಸ್ ಐಐಟಿಎಂ ತಂಡದವರು ಸಭೆಯಲ್ಲಿ ಮಾಹಿತಿ ನೀಡಿದರು.

ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾದಿಕಾರಿ ನಿರ್ಮಲಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೆಶಕರಾದ ಮಂಜುನಾಥ ಗುಂಡೂರ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಹೇಮಂತ್, ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭುಸ್ವಾಮಿ ಹಿರೇಮಠ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್, ಎನ್.ಹೆಚ್.ಎ.ಐ ಎಇಇ ಶ್ರೀದೇವಿ ದೂಪದ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಪ್ರತಿನಿಧಿಗಳು ಸೇರಿದಂತೆ ವಿವಿಧ ಇತರೆ ಇಲಾಖೆಗಳ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News