×
Ad

ಕೊಪ್ಪಳಕ್ಕೆ ಬಲ್ಡೋಟ ಕಾರ್ಖಾನೆ ವಿಸ್ತರಣೆ ಬೇಡ: ಪರಿಸರ ಜಾಗೃತಿ ಸಪ್ತಾಹ

Update: 2025-09-25 19:00 IST

ಕೊಪ್ಪಳ: ಬಲ್ಡೋಟಾ ಕಾರ್ಖಾನೆ ಕೊಪ್ಪಳ ನಗರಕ್ಕೆ ಹೊಂದಿಕೊಂಡಿರುವುದರಿಂದ ಇದರ ವಿಸ್ತರಣೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಜಂಟಿ ಕ್ರಿಯಾ ವೇದಿಕೆ ವತಿಯಿಂದ ನಗರದ ವಿವಿಧ ಭಾಗಗಳಲ್ಲಿ ಬಹಿರಂಗ ಸಭೆಗಳನ್ನು ನಡೆಸಲಾಯಿತು.

ನಗರದ ಕೇಂದ್ರೀಯ ಬಸ್ ನಿಲ್ದಾಣದ ಕನಕದಾಸ ವೃತ್ತ, ಮಾರುಕಟ್ಟೆ, ಗಡಿಯಾರ ಕಂಬ, ಕಿತ್ತೂರು ಚೆನ್ನಮ್ಮ ಸರ್ಕಲ್, ನಂದಿನಗರ ಮತ್ತು ದೇವರಾಜ ಅರಸು ಕಾಲೊನಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಬಚಾವೋ ಆಂದೋಲನ ಸಮಿತಿಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, “ಬಲ್ಡೋಟಾ ಬಿಎಸ್ಪಿಎಲ್ 54 ಸಾವಿರ ಕೋಟಿ ಹೂಡಿಕೆ ಮೂಲಕ ವಿಸ್ತಾರಗೊಂಡರೆ 27 ಮಾಲಿನ್ಯ ಉಂಟುಮಾಡುವ ಚಿಮಣಿಗಳು ಏಳಲಿವೆ. ಈಗಾಗಲೇ ಒಂದು ಚಿಮಣಿಯಿಂದ 13 ವರ್ಷಗಳಿಂದ ಉಂಟಾಗುತ್ತಿರುವ ದೂಳು, ಹಾರುಬೂದಿ, ಹೊಗೆಯಿಂದ ಕೊಪ್ಪಳದ ಅರ್ಧ ಭಾಗದ ವಾತಾವರಣ ಹಾಳಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾಗ್ಯನಗರ ಸೇರಿ ಸುಮಾರು 20 ಹಳ್ಳಿಗಳಿಗೆ ಕಾರ್ಖಾನೆಗಳ ಹೊಗೆ, ರಾಸಾಯನಿಕ ದೂಳು, ಕಲ್ಲಿದ್ದಲು ವಿದ್ಯುತ್ ಉತ್ಪಾದನಾ ಘಟಕಗಳ ದೂಷಿತ ವಾಯುವಿನ ಪರಿಣಾಮ ತಟ್ಟಿದೆ ಎಂದು ಅವರು ಆರೋಪಿಸಿದರು. “ಮುಖ್ಯಮಂತ್ರಿಗಳು ಹಾಗೂ ಕೈಗಾರಿಕಾ ಮಂತ್ರಿಗಳು ಗ್ರಾಮಗಳಿಗೆ ಭೇಟಿ ನೀಡಿ ಪರಿಸರ ಮಾಲಿನ್ಯ ಹಾಗೂ ಜನರ ಆರೋಗ್ಯ ಸ್ಥಿತಿ ಕುರಿತು ನೇರ ಮಾಹಿತಿ ಪಡೆಯಬೇಕು. ಭಾರತೀಯ ವಿಜ್ಞಾನ ಸಂಸ್ಥೆ ಅಥವಾ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ ಪರಿಸರ ಹಾಗೂ ಆರೋಗ್ಯ ಸರ್ವೆ ನಡೆಸಬೇಕು” ಎಂದು ಅವರು ಒತ್ತಾಯಿಸಿದರು.

ಸಭೆಯಲ್ಲಿ ಮುದುಕಪ್ಪ ಎಂ ಹೊಸಮನಿ, ಮಹಾದೇವಪ್ಪ ಮಾವಿನಮಡು, ಗಾಳೆಪ್ಪ ಮುಂಗೋಲಿ, ಬಂದೆನವಾಜ್ ಮನಿಯಾರ, ಮೂಕಪ್ಪ ಮೇಸ್ತ್ರಿ, ಪ್ರಕಾಶ ಮ್ಯಾದಾರ, ಮಖಬೂಲ್ ರಾಯಚೂರು ಹಾಗೂ ಯಮನೂರಪ್ಪ ಹಾಲಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News